ಕೋವಿಡ್ ಪರಿಣಾಮದಿಂದ ಉದ್ಯೋಗ ಬದಲಾಯಿಸಿದ ವೃತ್ತಿಪರರ ಸಂಖ್ಯೆ ಹೆಚ್ಚಳ; ವರದಿ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಸೆ.12: ಕೊರೋನ ಸಾಂಕ್ರಾಮಿಕದ ಹಾವಳಿಯ ಬಳಿಕ ದೇಶದಲ್ಲಿ ದೊಡ್ಡ ಸಂಖ್ಯೆಯ ವೃತ್ತಿಪರರು ತಮ್ಮ ಉದ್ಯೋಗವನ್ನು ಬದಲಾಯಿಸುವ ಬಗ್ಗೆ ಯೋಚಿಸಲಾರಂಭಿಸಿದ್ದಾರೆ ಹಾಗೂ ಹಲವಾರು ಮಂದಿ ಬೇರೆ ಉದ್ಯಮಗಳತ್ತ ಹೊರಳಿದ್ದಾರೆ. ಇನ್ನು ಕೆಲವರು ತಮ್ಮ ವೃತ್ತಿಯನ್ನು ಉನ್ನತೀಕರಣಗೊಳಿಸಲು ಬಯಸುತ್ತಿದ್ದಾರೆಂದು ಖ್ಯಾತ ಇ-ಕಾಮರ್ಸ್ ಸಂಸ್ಥೆ ಅಮೆಝಾನ್ ಇಂಡಿಯಾ ನಡೆಸಿದ ಸಮೀಕ್ಷಾ ವರದಿಯೊಂದು ತಿಳಿಸಿದೆ.
ಕೋವಿಡ್19 ಹಾವಳಿಯಿಂದಾಗಿ ಭಾರತೀಯ ವೃತ್ತಿಪರರು ಹಾಗೂ ಅವರ ಉದ್ಯೋಗಗಳ ಮೇಲಾಗಿರುವ ಪರಿಣಾಮಗಳನ್ನು ಅಂದಾಜಿಸಲು ಅಮೆಝಾನ್ ಇಂಡಿಯಾ ಈ ಸಮೀಕ್ಷೆಯನ್ನು ಪ್ರಾಯೋಜಿಸಿತ್ತು. ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆಯ ಮೂಲಕ ಆಗಸ್ಟ್ ತಿಂಗಳಲ್ಲಿ ಈ ಸಮೀಕ್ಷೆ ನಡೆಸಲಾಗಿತ್ತು. ಭಾರತಾದ್ಯಂತ 1 ಸಾವಿರ ವೃತ್ತಿಪರರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.50 ಮಂದಿ ತಾವು ಉದ್ಯೋಗದ ಹುಡುಕಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದಾಗಿ ತಿಳಿಸಿದರು.
ಕೊರೋನ ಹಾವಳಿಯ ಬಳಿಕ ತಮ್ಮ ವೇತನದಲ್ಲಿ ಕಡಿತವಾಗಿರುವುದಾಗಿಯೂ ಶೇ.35 ಮಂದಿ ಉತ್ತರಿಸಿದ್ದರೆ, ಶೇ.68 ಮಂದಿ ತಾವು ಬೇರೆ ಉದ್ಯಮಗಳತ್ತ ಹೊರಳಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ್ದಾರೆ.
ಶೇ. 33ರಷ್ಟು ಮಂದಿ ತಾವು ಈಗಾಗಲೇ ಹೊಸ ಉದ್ಯೋಗದ ಹುಡುಕಾಟದಲ್ಲಿದ್ದು, ಆ ಮೂಲಕ ತಾವು ಹೆಚ್ಚು ಅರ್ಥಪೂರ್ಣವಾದ ವೃತ್ತಿಯನ್ನು ನಿರ್ವಹಿಸುವ ನಿರೀಕ್ಷೆಯನ್ನು ಹೊಂದಿದ್ದಾರೆ. ಭಾರತದ ಶೇ.51ರಷ್ಟು ಉದ್ಯೋಗಾಕಾಂಕ್ಷಿಗಳು ಕೈಗಾರಿಕೆಗಳಲ್ಲಿ ಅವಕಾಶಗಳ ಹುಡುಕಾಟದಲ್ಲಿ ಆಸಕ್ತರಾಗಿದ್ದಾರೆ. ಉದ್ಯೋಗಕ್ಕಾಗಿ ಅರ್ಜಿಯನ್ನು ಸಲ್ಲಿಸುವಾಗ ಪ್ರತಿಫಲ ಧನ (ವೇತನ, ಸವಲತ್ತು ಇತ್ಯಾದಿ)ವನ್ನು ಪ್ರಮುಖವಾಗಿ ಪರಿಗಣಿಸುವುದಾಗಿ ಶೇ.55 ಮಂದಿ ಉತ್ತರಿಸಿದ್ದಾರೆ. ಕೊರೋನ ಸಾಂಕ್ರಾಮಿಕದ ಬಳಿಕ ಶೇ.56 ಮಂದಿ ಉದ್ಯೋಗದ ಭದ್ರತೆಯ ಬಗೆಗೂ ಹೆಚ್ಚಿನ ಕಾಳಜಿ ತೋರುತ್ತಿದ್ದಾರೆಂದು ವರದಿ ತಿಳಿಸಿದೆ.
ತಾವು ನೂತನ ಹಾಗೂ ವರ್ಗಾವಣೆಗೊಳ್ಳಬಹುದಾದಂತಹ ವೃತ್ತಿ ನೈಪುಣ್ಯತೆಗಳನ್ನು ಕಲಿಯುವಲ್ಲಿ ಆಸಕ್ತರಾಗಿರುವುದಾಗಿ ಶೇ.90 ಮಂದಿ ತಿಳಿಸಿದ್ದಾರೆ. ಕೋವಿಡ್-19 ಸಾಂಕ್ರಾಮಿಕದ ಹಾವಳಿಯ ಪರಿಣಾಮವಾಗಿ ಈ ಆಸಕ್ತಿ ಮೂಡಿದೆಯೆಂದು ಶೇ.74 ಮಂದಿ ತಿಳಿಸಿದ್ದಾರೆ.
ವೃತ್ತಿಯಲ್ಲಿ ಪ್ರಗತಿಯನ್ನು ಸಾಧಿಸಲು ತಾಂತ್ರಿಕ ಹಾಗೂ ಡಿಜಿಟಲ್ ನೈಪುಣ್ಯತೆ ಅಗತ್ಯವೆಂದು ಶೇ.45 ಮಂದಿ ಭಾವಿಸಿದ್ದಾರೆ. ವೃತ್ತಿ ಪ್ರಗತಿಗಾಗಿ ಮಾರುಕಟ್ಟೆ ಕ್ಷೇತ್ರದಲ್ಲಿ ಕುಶಲತೆಯನ್ನು ಸಾಧಿಸುವುದು ಮುಖ್ಯವೆಂದು ಶೇ.38 ಮಂದಿ ಭಾವಿಸಿದ್ದಾರೆ.
ತಮ್ಮ ಮಾಲಕರು ತಮಗೆ ಈಗಾಗಲೇ ಹೆಚ್ಚುವರಿ ತರಬೇತಿಯನ್ನು ನೀಡುವ ಮೂಲಕ ತಮ್ಮ ವೃತ್ತಿ ಪ್ರಗತಿಗೆ ಬೆಂಬಲ ನೀಡಿದ್ದಾರೆಂದು ಶೇ.76 ಮಂದಿ ತಿಳಿಸಿದ್ದಾರೆ ಹಾಗೂ ಶೇ.86 ಮಂದಿ ತಾವು ಈಗಾಗಲೇ ಈ ತರಬೇತಿಯನ್ನು ಸದುಪಯೋಗಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಸುಮಾರು ಶೇ.97ರಷ್ಟು ಮಂದಿ ತಾವು ಇನ್ನೂ ಹೆಚ್ಚಿನ ತರಬೇತಿಯನ್ನು ಪಡೆಯಲು ಬಯಸಿರುವುದಾಗಿ ತಿಳಿಸಿದ್ದಾರೆ.
2025ರ ವೇಳೆಗೆ ಅಮೆಝಾನ್ 20 ಲಕ್ಷ ನೇರ ಅಥವಾ ಅಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಈಗಾಗಲೇ ದೇಶದ 35 ನಗರಗಳಲ್ಲಿ 8,000 ಸಾವಿರ ನೇರ ಉದ್ಯೋಗಗನ್ನು ಸೃಷ್ಟಿಸುವುದಾಗಿ ಅದು ತಿಳಿಸಿದೆ.







