ಕಾರ್ಮಿಕ ಇಲಾಖೆಯಯಿಂದ ಹಣ ದುರುಪಯೋಗ ಆರೋಪ ; ತನಿಖೆಗೆ ಯು.ಟಿ.ಖಾದರ್ ಆಗ್ರಹ

ಮಂಗಳೂರು, ಸೆ.12: ರಾಜ್ಯ ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ಆಹಾರ, ಇಮ್ಯೂನಿಟಿ ಮತ್ತು ಸೇಫ್ಟಿ ಕಿಟ್‌ಗಳನ್ನು ನೀಡಲಾಗಿದ್ದು, ಇದರಲ್ಲಿ ವ್ಯಾಪಕ ದುರುಪಯೋಗವಾಗಿದೆ. ಕೂಡಲೆ ಸಮಗ್ರ ತನಿಖೆ ನಡೆಸಬೇಕು ಎಂದು ಶಾಸಕ ಯು.ಟಿ. ಖಾದರ್ ಸುದ್ದಿ ಗೋಷ್ಠಿಯಲ್ಲಿಂದು ಆಗ್ರಹಿಸಿದ್ದಾರೆ.
ಕಾರ್ಮಿಕ ಇಲಾಖೆವ ನಿಷ್ಪ್ರಯೋಜಕ ಕಿಟ್‌ಗಳನ್ನು ನೀಡಿದ್ದಾರೆ. ಇದಕ್ಕೆ ತಲಾ 2,500ರಿಂದ 3 ಸಾವಿರ ರು.ವರೆಗೆ ಖರ್ಚು ಮಾಡಲಾಗಿದೆ ಎಂಬ ಮಾಹಿತಿ ಲಭಿಸಿದೆ. ಕಟ್ಟಡ ಕಾರ್ಮಿಕರ ಕಲ್ಯಾಣಕ್ಕೆ ಉಪಯೋಗಿಸಬೇಕಾದ ನಿಧಿಯನ್ನು ಇದಕ್ಕೆ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಯು.ಟಿ.ಖಾದರ್ ಆರೋಪಿಸಿದರು.
ಶಿಕ್ಷಣ ನೀತಿ ಬಗ್ಗೆ ಚರ್ಚೆ: ರಾಷ್ಟ್ರೀಯ ಶಿಕ್ಷಣ ನೀತಿಯ ಸಾಧಕ ಬಾಧಕ ಜನರಿಗೆ ಗೊತ್ತಾಗ ಬೇಕು. ಈ ನೀತಿ ಜಾರಿಯಾದರೆ ವಿದೇಶದ ಯಾವ ಕಂಪೆನಿಯೂ ಬಂದು ಇಲ್ಲಿ ಶೈಕ್ಷಣಿಕ ವ್ಯವಸ್ಥೆ ಆರಂಭಿಸಬಹುದು. ಹೀಗಾದರೆ ಬಡವರ ಮಕ್ಕಳು ಶುಲ್ಕ ನೀಡುವವರು ಯಾರು ಎಂದು ಪ್ರಶ್ನಿಸಿದ ಅವರು, ಈ ಬಗ್ಗೆ ವಿಧಾನಮಂಡಲ ಅಧಿವೇಶನದಲ್ಲಿ ಸುದೀರ್ಘ ಚರ್ಚೆ ಆಗಬೇಕು ಎಂದರು. ಕರಾವಳಿಗೆ ಸಂಬಂಧಿಸಿದಂತೆ ಮೀನುಗಾರರಿಗೆ ಸಬ್ಸಿಡಿ ಸರಿಯಾಗಿ ಬರುತ್ತಿಲ್ಲ. ಉಡುಪಿ- ಕೊಣಾಜೆ ಹೆಲ್ತ್ ಕಾರಿಡಾರ್ ಯೋಜನೆ, ಮೆಟ್ರೋ ರೈಲು ಸರ್ವೇ ಇತ್ಯಾದಿ ವಿಚಾರಗಳನ್ನು ಕೂಡ ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಖಾದರ್ ತಿಳಿಸಿದರು.
ಬಡವರಿಗೆ ಮನೆ ನೀಡದ ಸರಕಾರ :- ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಬಡವರಿಗೆ ಒಂದೇ ಒಂದು ಮನೆ ನೀಡಿಲ್ಲ. ಚುನಾವಣೆ ಸಂದರ್ಭ ಬಡವರಿಗೆ ಮನೆ ಕೊಡಿಸುವುದಾಗಿ ಹೇಳಿ ಸರ್ವೇ ಮಾಡಿಸುವ ಆದೇಶ ಮಾಡಿದ್ದರೂ ಚುನಾವಣೆ ಬಳಿಕ ಇದು ಅನುಷ್ಠಾನವಾಗಿಲ್ಲ. ಇದೀಗ ಜಿಪಂ, ತಾಪಂ ಚುನಾವಣೆ ಹಿನ್ನೆಲೆಯಲ್ಲಿ ಮತ್ತೆ ಮನೆ ಕೊಡಿಸುವುದಾಗಿ ಆಮಿಷ ಒಡ್ಡಿ ವಂಚಿಸಲು ಮುಂದಾಗಿದ್ದಾರೆ. ಸರ್ಕಾರ ಮನೆ ಕೊಡಿಸುವ ಆಸೆಯಿಂದ ಅನೇಕರು ತಮ್ಮ ಹಳೆ ಮನೆ ಕೆಡವಿ ಜೋಪಡಿಯಲ್ಲಿ ವಾಸ ಮಾಡು ವಂತಾಗಿದೆ. ಸೋಮವಾರದಿಂದ ನಡೆಯುವ ಅಧಿವೇಶನದಲ್ಲಿ ಈ ವಿಚಾರ ಪ್ರಸ್ತಾಪಿಸು ವುದಾಗಿ ಯು.ಟಿ. ಖಾದರ್ ಹೇಳಿದರು.
ಸುದ್ದಿ ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಸದಾಶಿವ ಉಳ್ಳಾಲ್, ಮುಹಮ್ಮದ್ ಮೋನು, ಸಂತೋಷ್ ಶೆಟ್ಟಿ,ಅಬ್ದುಲ್ ಜಬ್ಬಾರ್ ಬೊಳಿಯಾರ್, ಅಲ್ವಿನ್ ಡಿ ಸೋಜ ಮೊದಲಾದ ವರು ಉಪಸ್ಥಿತರಿದ್ದರು.







