ಇಂದಿನಿಂದ ರಾಜ್ಯ ವಿಧಾನ ಮಂಡಲ ಅಧಿವೇಶನ ಕಲಾಪ ಆರಂಭ

ಬೆಂಗಳೂರು: ವಿಧಾನ ಮಂಡಲ ಮಳೆಗಾಲದ ಅಧಿವೇಶನ ಕಲಾಪ ಇಂದಿನಿಂದ ಆರಂಭಗೊಳ್ಳಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ವಹಿಸಿಕೊಂಡ ಬಳಿಕ ನಡೆಯಲಿರುವ ಚೊಚ್ಚಲ ಅಧಿವೇಶನ ಇದಾಗಿದ್ದು, ಸರಕಾರದ ಆಡಳಿತ ವೈಫಲ್ಯಗಳನ್ನು ಪ್ರಸ್ತಾಪಿಸಲು ಪ್ರತಿಪಕ್ಷಗಳ ಸಜ್ಜುಗೊಂಡಿವೆ.
11ಗಂಟೆಯಿಂದ ವಿಧಾನ ಮಂಡಲ ಉಭಯ ಸದನಗಳ ಕಲಾಪ ಆರಂಭಗೊಳ್ಳಲಿದ್ದು, ಇತ್ತಿಚೆಗೆ ಅಗಲಿದ ಮಾಜಿ ಸಚಿವರು, ಮಾಜಿ ಶಾಸಕರು ಸೇರಿದಂತೆ ಈಚೆಗೆ ಸಾವನ್ನಪ್ಪಿದ ಗಣ್ಯರಿಗೆ ಸದನದಲ್ಲಿ ಸಂತಾಪ ಸೂಚನೆ ಪ್ರಸ್ತಾವ ಮಂಡನೆಯಾಗಲಿದೆ. ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಸದನವನ್ನು ಮಂಗಳವಾರ(ಸೆ.14)ಕ್ಕೆ ಮುಂದೂಡಿಕೆ ಮಾಡುವ ಸಾಧ್ಯತೆಗಳಿವೆ.
ಸೆ.14ರಿಂದ ಅಧಿಕೃತ ಕಾರ್ಯಕಲಾಪ ಆರಂಭವಾಗಲಿದ್ದು, ಪ್ರಶ್ನೋತ್ತರ, ನಿಲುವಳಿ ಸೂಚನೆ ಸಹಿತ ಇನ್ನಿತರ ಪ್ರಮುಖ ವಿಚಾರಗಳು ಚರ್ಚೆಗೆ ಬರಲಿವೆ. ಬೆಲೆ ಏರಿಕೆ, ಕೋವಿಡ್ ನಿರ್ವಹಣೆ, ಸಚಿವರ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಸಹಿತ ಇತರೆ ವಿಚಾರಗಳನ್ನು ಮುಂದಿಟ್ಟುಕೊಂಡು ಸರಕಾರವನ್ನು ಅಡ್ಡ ಕತ್ತರಿಯಲ್ಲಿ ಸಿಲುಕಿಸಲು ವಿಪಕ್ಷಗಳ ಸಿದ್ಧತೆ ನಡೆಸಿವೆ. ಇದಕ್ಕೆ ಪ್ರತಿತಂತ್ರ ರೂಪಿಸಿ, ವಿಪಕ್ಷಗಳ ವಾಗ್ದಾಳಿಯನ್ನು ಸಮರ್ಥವಾಗಿ ಎದುರಿಸಲು ಬಿಜೆಪಿ ತನ್ನ ಬತ್ತಳಿಕೆಯಲ್ಲಿ ಅಸ್ತ್ರಗಳನ್ನು ಸಿದ್ಧಪಡಿಸಿಕೊಂಡಿದೆ.
ಆನ್‍ಲೈನ್ ಜೂಜಾಟ ನಿಷೇಧಿಸುವ ಕರ್ನಾಟಕ ಲೀಸ್ ಕಾಯ್ದೆ ತಿದ್ದುಪಡಿ ಮಸೂದೆ ಸೇರಿದಂತೆ ಈಗಾಗಲೇ ಸುಗ್ರೀವಾಜ್ಞೆ ರೂಪದಲ್ಲಿರುವ 4 ಮಸೂದೆಗಳು ಹಾಗೂ ಅಂಗೀಕಾರಕ್ಕೆ ಬಾಕಿ ಇರುವ ಮಸೂದೆಗಳು ಸೇರಿದಂತೆ ಒಟ್ಟು 18 ಮಸೂದೆಗಳು ಈ ಅಧಿವೇಶನದಲ್ಲಿ ಚರ್ಚೆಗೆ ಬರಲಿವೆ. ಕೋವಿಡ್ ಮುನ್ನಚ್ಚರಿಕೆಯೊಂದಿಗೆ ಅಧಿವೇಶನ ಆರಂಭಗೊಳ್ಳುತ್ತಿದ್ದು, ರಾಜ್ಯದ ಜನರ ಚಿತ್ತ ಅಧಿವೇಶನದತ್ತ ನೆಟ್ಟಿದೆ.







