'ವೆಲ್ಫೇರ್ ಪಾರ್ಟಿ'ಯಿಂದ ಮಹಿಳಾ ಸುರಕ್ಷತಾ ಜಾಗೃತಿ ಅಭಿಯಾನಕ್ಕೆ ಚಾಲನೆ

ಮಂಗಳೂರು, ಸೆ.12: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಮಹಿಳಾ ವಿಭಾಗದಿಂದ 'ಮಹಿಳೆಯರ ಸುರಕ್ಷತೆ ದೇಶದ ಹೊಣೆ' ಎಂಬ ಧ್ಯೇಯದಡಿಯಲ್ಲಿ ಮಹಿಳಾ ಸುರಕ್ಷತಾ ಜಾಗೃತಿ ಅಭಿಯಾನವನ್ನು ಸೆ.12ರಿಂದ 19ರವರೆಗೆ ಹಮ್ಮಿಕೊಳ್ಳಲಾಗಿದೆ. ಅಭಿಯಾನಕ್ಕೆ ರವಿವಾರ ವೆಲ್ಫೇರ್ ಪಕ್ಷದ ದ.ಕ. ಜಿಲ್ಲಾ ಕಚೇರಿಯಲ್ಲಿ ಚಾಲನೆ ನೀಡಲಾಯಿತು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಭಿಯಾನ ಸಂಚಾಲಕಿ ಮಮ್ತಾಝ್ ವಾಮಂಜೂರು, ದೇಶದಲ್ಲಿ ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯವನ್ನು ಖಂಡಿಸುವುದು, ಮಹಿಳೆಯರಲ್ಲಿ ಜಾಗೃತಿ ಮೂಡಿಸುವುದು, ಮಹಿಳೆಯರ ಸುರಕ್ಷತೆಯ ಹೊಣೆ ಸರಕಾರದ್ದಾಗಿದ್ದು, ಸರಕಾರಕ್ಕೆ ಅದರ ಹೊಣೆಗಾರಿಕೆಯನ್ನು ನೆನಪಿಸುವುದು, ಮಹಿಳಾ ಸಬಲೀಕರಣದ ಅಂಗವಾಗಿ ಮಹಿಳೆಯರಲ್ಲಿ ರಾಜಕೀಯ ಪ್ರಜ್ಞೆ ಹೆಚ್ಚಿಸುವುದು ಈ ಅಭಿಯಾನದ ಮುಖ್ಯ ಉದ್ದೇಶ ಎಂದರು.
ಅಭಿಯಾನದ ಪ್ರಯುಕ್ತ ವಿವಿಧೆಡೆಗಳಲ್ಲಿ ಮಹಿಳಾ ಸುರಕ್ಷತಾ ಜಾಗೃತಿಯ ಬಗ್ಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಿದ್ದು ಅದರಂತೆ ಸುದ್ದಿಗೋಷ್ಠಿ, ರ್ಯಾಲಿ, ವಿಚಾರಗೋಷ್ಠಿ, ಕಾರ್ನರ್ ಮೀಟಿಂಗ್ಸ್, ಇತರ ಮಹಿಳಾ ಸಂಘಟನೆ ಜತೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗವುದು. ಸೆ.14ರಂದು ಉಳ್ಳಾಲದಲ್ಲಿ ವಿಚಾರಗೋಷ್ಠಿ, ಸೆ.16ರಂದು ವಿಟ್ಲದಲ್ಲಿ ವಿಚಾರ ವಿನಿಮಯ, ಸೆ.18ರಂದು ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಅಭಿಯಾನ ಮತ್ತು ಸೆ.19ರಂದು ವೆಬಿನಾರ್ ಮೂಲಕ ಅಭಿಯಾನದ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ಈ ವೇಳೆ ಪಕ್ಷದ ದ.ಕ. ಜಿಲ್ಲಾ ಸಮಿತಿಯ ಉಪಾಧ್ಯಕ್ಷೆ ಮರಿಯಂ ಶಹೀರ, ಅಭಿಯಾನ ಸದಸ್ಯೆಯರಾದ ಜ್ಯೋತಿ ಮತ್ತು ಝೀನತ್ ಇಸ್ಮಾಯೀಲ್ ಉಪಸ್ಥಿತರಿದ್ದರು.







