ಕಿನ್ಯ: ಐದು ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ: ಆರೋಪಿಯ ಸೆರೆ
![ಕಿನ್ಯ: ಐದು ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ: ಆರೋಪಿಯ ಸೆರೆ ಕಿನ್ಯ: ಐದು ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ: ಆರೋಪಿಯ ಸೆರೆ](https://www.varthabharati.in/sites/default/files/images/articles/2021/09/13/306258-1631515724.gif)
ಬಂಧಿತ ಆರೋಪಿ ಆರಿಫ್ ಪಾಷಾ
ಉಳ್ಳಾಲ, ಸೆ.13: ಐದು ವರ್ಷದ ಬಾಲಕಿಯೊಬ್ಬಳಿಗೆ ತಿಂಡಿಯ ಆಮಿಷವೊಡ್ಡಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಯುವಕನೋರ್ವನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಕಿನ್ಯ ಗ್ರಾಮದ ನಡುಕುಮೇರು ಎಂಬಲ್ಲಿ ನಡೆದಿದೆ. ಆರೋಪಿಯ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪೊಕ್ಸೋ ಪ್ರಕರಣ ದಾಖಲಾಗಿದೆ.
ಮೂಲತಃ ಬೆಂಗಳೂರಿನ ಕಲಾಸಿಪಾಳ್ಯ ನಿವಾಸಿ, ಸದ್ಯ ಕಲ್ಕಟ್ಟದಲ್ಲಿ ವಾಸಿಸುತ್ತಿರುವ ಕೂಲಿ ಕಾರ್ಮಿಕ ಆರಿಫ್ ಪಾಷಾ(30) ಬಂಧಿತ ಆರೋಪಿ. ಬಾಲಕಿಯ ತಂದೆಗೆ ಪರಿಚಿತನಾಗಿರುವ ಆರೋಪಿ ರವಿವಾರ ಬಾಲಕಿಗೆ ತಿನ್ನಲು ಬಿಸ್ಕೆಟ್, ಮಾಂಸ ಕೊಡಿಸುವುದಾಗಿ ನಂಬಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಈ ವೇಳೆ ಗಾಬರಿಗೊಂಡ ಬಾಲಕಿ ಅಳುತ್ತಾ ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ.
ಇದೇವೇಳೆ ಅದೇದಾರಿಯಲ್ಲಿ ಬೈಕಿನಲ್ಲಿ ಬರುತ್ತಿದ್ದ ಸಾಮಾಜಿಕ ಕಾರ್ಯಕರ್ತ ತಲಪಾಡಿಯ ಯಶು ಪಕಳ ದಂಪತಿ ಬೈಕನ್ನು ನಿಲ್ಲಿಸಿ ಅಳುತ್ತಾ ಹೋಗುತ್ತಿದ್ದ ಬಾಲಕಿಯನ್ನು ವಿಚಾರಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಕೂಡಲೇ ಅವರು ಸ್ಥಳೀಯರಿಗೆ ಮಾಹಿತಿ ನೀಡಿದ್ದು, ಸ್ಥಳೀಯರು ಆರೋಪಿ ಆರಿಫ್ ಪಾಷಾನನ್ನು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿಯ ವಿರುದ್ಧ ಪೊಕ್ಸೊ ಪ್ರಕರಣ ದಾಖಲಿಸಿಕೊಂಡಿರುವ ಉಳ್ಳಾಲ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.