"ಸಂಸ್ಕೃತ ಮಾತ್ರವಲ್ಲ, ಜನರು ಮಾತನಾಡುವ ಎಲ್ಲ ಭಾಷೆಗಳೂ ದೇವರ ಭಾಷೆಯೇ" ಎಂದ ಮದ್ರಾಸ್ ಹೈಕೋರ್ಟ್

ಚೆನ್ನೈ: ತಮಿಳು ಸೇರಿದಂತೆ ಜನರು ಮಾತನಾಡುವ ಭಾಷೆಗಳೆಲ್ಲವೂ 'ದೇವರ ಭಾಷೆ' ಎಂದು ಹೇಳಿದ ಮದ್ರಾಸ್ ಹೈಕೋರ್ಟ್, ದೇಶಾದ್ಯಂತ ದೇವಳಗಳ ಪ್ರತಿಷ್ಠಾಪನಾ ಕಾರ್ಯಗಳು ಸಂತರಾದ ಅಝ್ವರ್, ನಾಯನ್ಮಾರ್, ಅರುಣಗಿರಿನಾಥ್ ಅವರುಗಳಿಂದ ರಚಿತವಾದ ತಮಿಳು ಮಂತ್ರಗಳನ್ನು ಪಠಿಸಿ ನಡೆಸಬೇಕು ಎಂದು ಹೇಳಿದೆ.
"ಸಂಸ್ಕೃತ ಭಾಷೆಯೊಂದೇ ದೇವರ ಭಾಷೆಯೆಂದು ಜನರು ನಂಬುವಂತೆ ನಮ್ಮ ದೇಶದಲ್ಲಿ ಮಾಡಲಾಗಿದೆ ಎಂದು ನ್ಯಾಯಮೂರ್ತಿಗಳಾದ ಎನ್ ಕಿರುಬಕರನ್ (ಈಗ ನಿವೃತ್ತ) ಹಾಗೂ ಪಿ ಪುಗಲ್ಬೆಂಧಿ ಅವರ ಪೀಠ ಇತ್ತೀಚೆಗೆ ಹೇಳಿದೆ.
"ಜಗತ್ತಿನ ಹಲವೆಡೆ ಧಾರ್ಮಿಕ ಪ್ರಕ್ರಿಯೆಗಳಿಗಾಗಿ ಸ್ಥಳೀಯ ಭಾಷೆಗಳನ್ನು ಬಳಸಲಾಗುತ್ತದೆ ಆದರೆ ನಮ್ಮ ದೇಶದಲ್ಲಿ ಸಂಸ್ಕೃತ ಭಾಷೆಯೊಂದೇ ದೇವರ ಭಾಷೆ ಇತರ ಭಾಷೆಗಳು ಅದಕ್ಕೆ ಸರಿಸಾಟಿಯಲ್ಲ ಎಂದು ಎಲ್ಲರೂ ನಂಬುವಂತೆ ಮಾಡಲಾಗಿದೆ. ನಿಸ್ಸಂಶಯವಾಗಿ ಸಂಸ್ಕೃತ ಒಂದು ಪ್ರಾಚೀನ ಮುಖ್ಯವಾದ ಭಾಷೆ. ಆದರೆ ಸಂಸ್ಕೃತದಲ್ಲಿ ವೇದ ಪಠಿಸಿದರೆ ಭಕ್ತರ ಮೊರೆಯನ್ನು ದೇವರು ಕೇಳುತ್ತಾನೆ ಎಂಬ ನಂಬಿಕೆಯಿದೆ" ಎಂದು ಪೀಠ ಹೇಳಿದೆ.
ತಮಿಳುನಾಡಿನ ಕರೂರು ಜಿಲ್ಲೆಯ ಅರುಲ್ಮಿಗು ಪಶುಪಥೇಶ್ವರ ಸ್ವಾಮಿ ತಿರಿಕೋವಿಲ್‍ನಲ್ಲಿ ಪ್ರತಿಷ್ಠಾಪನಾ ಸಮಾರಂಭವನ್ನು ತಿರುಮುರೈಕಲ್, ತಮಿಳು ಸೈವ ಮಂತ್ರಮ್ ಮತ್ತು ಸಂತ ಅಮರಾವತಿ ಆತ್ರಂಗರೈ ಕರೂರರ್ ಅವರ ಹಾಡುಗಳನ್ನು ಹಾಡಿ ನಡೆಸಬೇಕೆಂದು ಕೋರಿ ಸಲ್ಲಿಸಲಾದ ಅಪೀಲಿನ ಮೇಲೆ ವಿಚಾರಣೆಯನ್ನು ನಡೆಸಿದ ನ್ಯಾಯಾಲಯ, ಜನರು ಮಾತನಾಡುವ ಪ್ರತಿಯೊಂದು ಭಾಷೆಯೂ ದೇವರ ಭಾಷೆ ಎಂದು ಹೇಳಿದೆ.







