ಮಹಿಷ ದಸರಾ ಆಚರಣೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಪ್ರೊ.ಮಹೇಶ್ ಚಂದ್ರಗುರು

ಮೈಸೂರು: 'ಯಾರಿಂದಲೂ ಮಹಿಷ ದಸರಾ ಆಚರಣೆ ತಡೆಯಲು ಸಾಧ್ಯವಿಲ್ಲ' ಎಂದು ಪ್ರೊ.ಮಹೇಶ್ ಚಂದ್ರಗುರು ಹೇಳಿದ್ದಾರೆ.
ಸೋಮವಾರ ಮಹಿಷ ದಸರಾ ಆಚರಣಾ ಸಮಿತಿಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಎರಡು ವಿಚಾರಕ್ಕೆ ಸಂಘರ್ಷ ನಡೆಯುತ್ತಲೆ ಬಂದಿದೆ. ಅವು ಯಾವುದೆಂದರೆ ಒಂದು ಪುರಾಣ ಮತ್ತೊಂದು ಇತಿಹಾಸ. ಪುರಾಣ ನಂಬಿದವರು ಕೆಟ್ಟಿದ್ದರೇ, ಇತಿಹಾಸವನ್ನು ನಂಬಿದವರು ಉದ್ದಾರವಾಗುತ್ತಿದ್ದಾರೆ. ಮಹಿಷ ಈ ನಾಡಿನ ರಾಜ. ಆದರೆ, ವೈದಿಕರು ಸತ್ಯವನ್ನು ಮರೆಮಾಚಿ ಪುರಾಣ ಸೃಷ್ಟಿ ಮಾಡಿದ್ದಾರೆ ಎಂದರು.
ವೈದಿಕರು ಸತ್ಯ, ಸಮಾನತೆ, ಭಾತೃತ್ವ, ಸಾಮಾಜಿಕ ನ್ಯಾಯದ ವಿರೋಧಿಗಳು. ಅವರು ಇತಿಹಾಸವನ್ನು ಒಪ್ಪಿಕೊಳ್ಳಲ್ಲ. ಇತಿಹಾಸವನ್ನು ಮರೆಮಾಚಿ ಪುರಾಣಗಳನ್ನು ಸೃಷ್ಟಿ ಮಾಡಿ ಜನಾಂಗೀಯ ವೈರುತ್ವವನ್ನು ಬೆಳೆಸಿ ಮೌಢ್ಯ ಬಿತ್ತುತ್ತಿದ್ದಾರೆ. ಚಾಮುಂಡಿಯ ಪುರಾಣ ಸೃಷ್ಟಿಯಲ್ಲೂ ಇದನ್ನು ಕಾಣಬಹುದು. ಇಲ್ಲಿ ಮಹಿಷನನ್ನು ರಾಕ್ಷಸನಾಗಿ ಬಿಂಬಿಸಲಾಗಿದೆ. ಮಹಿಷಾ ರಾಕ್ಷಸನ್ನಲ್ಲ. ಈ ನಾಡಿನ ರಕ್ಷಕ. ಜನ ಇತಿಹಾಸವನ್ನು ತಿಳಿಯಬೇಕು ‘ಮಹಿಷ ಸತ್ಯ, ಚಾಮುಂಡಿ ಮಿಥ್ಯ’ ಎಂಬುದನ್ನು ಅರಿಯಬೇಕು ಎಂದು ಹೇಳಿದರು.
ಮಹಿಷ ಮೈಸೂರಿನ ಮೂಲ ಪುರುಷ. ಆತ ಪ್ರಾಚೀನ ಮಹಿಷ ಮಂಡಲವನ್ನು ಆಳಿದವ. ಮೈಸೂರು ಎಂಬ ಹೆಸರು ಆತನ ಮಹಿಷ ಕುಲದಿಂದ ಬಂದಿದ್ದು, ಪಾಲಿ ಭಾಷೆಯಲ್ಲಿ ಲಭ್ಯವಿರುವಂತೆ ಐತಿಹಾಸಿಕ ವಿವರಗಳ ಪ್ರಕಾರ ಅಶೋಕ ಚಕ್ರವರ್ತಿ ಕ್ರಿಸ್ತಪೂರ್ವ ೩ನೇ ಶತಮಾನದಲ್ಲಿ ಮಾದೇವ (ಮಹಿಷಾ)ಎಂಬುವನನ್ನು ಬೌದ್ಧ ಧರ್ಮ ಪ್ರಚಾರಕ್ಕಾನಾಗಿ ಇಲ್ಲಿಗೆ ಬರುತ್ತಾನೆ. ಮಹಿಷ ಈ ಪ್ರಾಂತ್ಯವನ್ನು ದಕ್ಷಿಣ ಭಾರತದಿಂದ ಹಿಡಿದು ವಿಂದ್ಯಾಪರ್ವತದವರೆಗೂ ವಿಸ್ತರಿಸುತ್ತಾನೆ. ಇದು ಜಗತ್ತಿನಲ್ಲಿ ಇತಿಹಾಸದಲ್ಲಿ ದಾಖಲಾಗಿದೆ. ಈ ಚಾರಿತ್ರಿಕ ವ್ಯಕ್ತಿಯನ್ನು ಮನುವಾದಿಗಳು ರಾಕ್ಷಸಸನ್ನಾಗಿ ಬಿಂಬಿಸಿದ್ದಾರೆ ಎಂದರು.
ಮಹಿಷಾ ದಸರಾ ಸರ್ಕಾರದ ದಸರಾಕ್ಕೆ ವಿರೋಧಿಯಲ್ಲ: ವೈದಿಕರ ಇತಿಹಾಸವೆಂದರೆ ಇಸವಿ ದಿನಾಂಕಗಳಿಲ್ಲದ ಇತಿಹಾಸ ಎಂದು ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದಾರೆ. ನಮಗೆ ಪುರಾಣ ಗ್ರಂಥಗಳಲ್ಲಿ ನಂಬಿಕೆ ಇಲ್ಲ. ಸಂವಿಧಾನ ಮೇಲೆ ನಂಬಿಕೆ. ಸಮಾನತೆಯ ಮೇಲೆ ನಂಬಿಕೆ. ಸರ್ಕಾರದ ದಸರಾ ಆಚರಣೆ ವಿರುದ್ಧವಾಗಿ ನಾವು ಮಹಿಷ ದಸರಾ ಆಚರಣೆ ಮಾಡುತ್ತಿಲ್ಲ. ಅಂತಹ ದುಷ್ಟರು, ದುರಂಹಕಾರಿಗಳು ನಾವಲ್ಲ. ನಮ್ಮ ಮೈಸೂರು ಮಹಿಷ ಕರ್ಮಭೂಮಿ. ಮೂಲನಿವಾಸಿಗಳ ಆದಿ ಪುರುಷ. ಇದು ನಮ್ಮ ಧಾರ್ಮಿಕ ಆಚರಣೆ ಎಂದರು.
ಪ್ರತಾಪ ಸಿಂಹನಂತಹ ನೂರಾರು ಮಂದಿ ಬಂದರು ನಮ್ಮ ಆಚರಣೆ ನಿಲ್ಲೋಲ್ಲ: 2011ರಿಂದಲೂ ಮಹಿಷ ದಸರಾ ಆಚರಣೆ ಮಾಡಲಾಗುತ್ತಿದೆ. ಸಿದ್ದರಾಮಯ್ಯ ಸರ್ಕಾರ ಕೂಡ ನಮ್ಮ ಧಾರ್ಮಿಕ ಆಚರಣೆ ಅನುಮತಿ ನೀಡಿತ್ತು. ಆದರೆ, 2019ರಲ್ಲಿ ಪ್ರತಾಪ ಸಿಂಹ ನಮ್ಮ ಧಾರ್ಮಿಕ ಆಚರಣೆಗೆ ಅಡ್ಡಿ ಪಡಿಸಿದ್ದಾನೆ. ಪ್ರತಾಪ ಸಿಂಹ ನಂತಹ ನೂರಾರು ಮಂದಿ ಬಂದರು, ನಮ್ಮ ಧಾರ್ಮಿಕ ಆಚರಣೆಯನ್ನು ತಡೆಯಲು ಸಾಧ್ಯವಿಲ್ಲ. ಇವರಿಗೆ ನಮ್ಮ ಆಚರಣೆ ನಿಲ್ಲಿಸುವ ಧಮ್ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಂತಕ ಪ್ರೊ.ಕೆ.ಎಸ್.ಭಗವಾನ್ ಮಾತನಾಡಿ, ರಾಮಾಯಣದಲ್ಲಿಯೂ ಬೌದ್ಧಬಿಕ್ಕುಗಳನ್ನು ಕೊಲ್ಲಿಸಿ, ರಾಕ್ಷಸರಂತೆ ಬಿಂಬಿಸಲಾಗಿದೆ. ವೈದಿಕರು ಬಿಂಬಿಸಿರುವಾಗೇ ಮಹಿಷ ರಾಕ್ಷಸನಾಗಿದ್ದರೆ ಮೈಸೂರಿಗೆ ಆತನ ಹೆಸರು ಯಾಕೆ ನಾಮಕಾರಣ ಮಾಡುತ್ತಿದ್ದರು. ಮಹಿಷ ಜನಾರೋದ್ಧರಕ, ಜನ ರಕ್ಷಕ. ಯುವ ಸಮೂಹ ಇತಿಹಾಸ ಅರಿಯಬೇಕು. ಪುರಾಣಗಳನ್ನು ತಿರಸ್ಕರಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಮಹಾಪೌರ ಪುರುಷೋತ್ತಮ್ ಮಾತನಾಡಿ, ಆದಿ ಪುರುಷ ಮಹಿಷ ದಸರಾ ಆಚರಣೆ ನಮ್ಮ ಧಾರ್ಮಿಕ ಹಕ್ಕು. ಆದರೆ, ಪ್ರಜ್ಞಾವಂತ ಜಾತ್ಯತೀತ ಜನತೆ ಮಹಿಷಾ ದಸರಾ ಆಚರಣೆ ಮಾಡುತ್ತಿದ್ದಾರೆ. ಆದರೆ, ಇದಕ್ಕೆ ಜಾತಿ ಬಣ್ಣ ಕಟ್ಟಿ ಮೂಲನಿವಾಸಿಗಳ ವಿರುದ್ಧ ಸರ್ವಣೀಯರು ಹಾಗೂ ಮೇಲ್ವರ್ಗದವರನ್ನು ಎತ್ತಿಕಟ್ಟುತ್ತಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಜಾತಿಗಳೇ ಇಲ್ಲದ ಮಹಿಷನ ಕಾಲದಲ್ಲಿ ಜಾತಿ ಹೇಗೆ ಬಂತೆಂದು ಈ ದುರಳ ರಾಜಕಾರಣಿಗಳು ಹೇಳಬೇಕು? ನಮ್ಮ ಧಾರ್ಮಿಕ ಆಚರಣೆಗೆ ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತೇವೆ. ಮಹಿಷ ದಸರಾವನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ. ಅನುಮತಿ ನೀಡದಿದ್ದರೂ ಮಹಿಷನಿಗೆ ಪುಷ್ಪಾರ್ಚನೆ ಮಾಡುವುದಂತೂ ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.
ಲೇಖಕ ಸಿದ್ದಸ್ವಾಮಿ, ಚಿಕ್ಕಂದಾನಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ದೇವಾಲಯಗಳನ್ನು ತೆರವುಗೊಳಿಸುತ್ತಿರುವುದು ಅಕ್ಷಮ್ಯ. ಇದನ್ನು ಸಹಿಸಲು ಆಗದು. ಹಿಂದೂ ಧರ್ಮದ ರಕ್ಷಕರಂತೆ ಬಿಂಬಿಸಿಕೊಂಡು ಅಧಿಕಾರಕ್ಕೇರಿದ ಬಿಜೆಪಿ ಅವರು ದೇವಾಲಯಗಳನ್ನು ಹೊಡೆಯುತ್ತಿದ್ದರು ಯಾಕೇ ಸುಮ್ಮನಿದ್ದಾರೆ. ಸರ್ವೋಚ್ಚ ನ್ಯಾಯಾಲಯದಲ್ಲಿ ತೀರ್ಪಿನ ಮರುಪರಿಶೀಲನೆ ಅರ್ಜಿ ಯಾಕೇ ಸಲ್ಲಿಸಲಿಲ್ಲ. ಇದನ್ನು ಪ್ರಶ್ನಿಸಿ ಸಂಸದ ಪ್ರತಾಪ ಸಿಂಹ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜೀನಾಮೆ ನೀಡುವಂತೆ ಆಗ್ರಹಿಸಬೇಕು. ದೇಶದಾದ್ಯಂತ ತೀರ್ಪು ಬಂದಿದ್ದರೂ ಮೈಸೂರಿನಲ್ಲಿಯೇ ಯಾಕೇ ದೇವಾಸ್ಥಾನಗಳನ್ನು ಹೊಡೆಯುತ್ತಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಕಾರಣ.
- ಕೆ.ಎಸ್.ಶಿವರಾಮು, ರಾಜ್ಯಾಧ್ಯಕ್ಷ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ.







