ಉಡುಪಿ : ಆಸ್ಕರ್ ಫೆರ್ನಾಂಡಿಸ್ ನಿಧನಕ್ಕೆ ಸಂತಾಪಗಳು

ಪೇಜಾವರ ಮಠಾಧೀಶರಿಂದ ಸಂತಾಪ
ಉಡುಪಿ, ಸೆ.13: ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ಅವರು ನಿಧನ ಹೊಂದಿರುವ ವಿಚಾರ ತಿಳಿದು ತೀವ್ರ ವಿಷಾಧವಾಗಿದೆ ಎಂದು ಪೇಜಾವರ ಮಠಾಧೀಶರಾದ ಶ್ರೀವಿಶ್ವಪ್ರಸನ್ನ ತೀರ್ಥರು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
ಉಡುಪಿ ಲೋಕಸಭಾ ಸದಸ್ಯರಾಗಿ, ಕೇಂದ್ರ ಸಚಿವರಾಗಿ ಸಲ್ಲಿಸಿದ ಸೇವೆ ಅಪಾರ. ಯೋಗ ವಿದ್ಯೆಯಲ್ಲಿ ವಿಶೇಷ ಪರಿಣಿತಿ ಹೊಂದಿದ್ದ ಅವರು ಗೋವಿನ ಉತ್ಪನ್ನಗಳ ಉಪಯುಕ್ತತೆ ಬಗ್ಗೆ ಸಂಸತ್‌ನಲ್ಲಿ ವಿಚಾರ ಮಂಡಿಸಿದ್ದರು.ಪೇಜಾವರ ಮಠವೂ ಸೇರಿದಂತೆ ಉಡುಪಿ ಎಲ್ಲಾ ಮಠ ಗಳೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದ ಅವರ ನಿಧನದಿಂದ ನಾಡು ಓರ್ವ ಮುತ್ಸದ್ದಿಯನ್ನು ಕಳೆದು ಕೊಂಡಂತಾಗಿದೆ ಎಂದು ಪೇಜಾವರಶ್ರೀಗಳು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫೆರ್ನಾಂಡಿಸ್ ಅವರ ನಿಧನಕ್ಕೆ ಉಡುಪಿ-ಚಿಕ್ಕಮಗಳೂರು ಸಂಸದೆ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸಂತಾಪ ಸೂಚಿಸಿದ್ದಾರೆ.
ಸರಳ ಸಜ್ಜನ ನಾಯಕರಾಗಿ ರಾಷ್ಟ್ರ ಮಟ್ಟದಲ್ಲಿ ತಮ್ಮ ಛಾಪನ್ನು ಬೆಳೆಸಿಕೊಂಡಿದ್ದ ಅವರು ಉಡುಪಿ ಸಂಸದರಾಗಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಅವರ ಸೇವೆ ಸ್ಮರಣೀಯ ಎಂದು ಶೋಭಾ ಕರಂದ್ಲಾಜೆ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
ಸಚಿವ ಸುನೀಲ್ ಕುಮಾರ್
ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ನಿಧನಕ್ಕೆ ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನೀಲ್ ಕುಮಾರ್ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಅವರ ನಿಧನದ ಸುದ್ದಿ ತಿಳಿದು ದುಃಖವಾಯಿತು. ಲೋಕಸಭಾ ಸದಸ್ಯರಾಗಿ ರಾಜ್ಯಸಭಾ ಸದಸ್ಯರಾಗಿ ಅವರು ಸಲ್ಲಿಸಿದ ಸೇವೆ ಅನನ್ಯವಾದದ್ದು. ಸತತ ಐದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಆಸ್ಕರ್ ಫರ್ನಾಂಡಿಸ್ ಉಡುಪಿಯಲ್ಲಿ ಹುಟ್ಟಿ, ನಂತರ ರಾಷ್ಟ್ರಮಟ್ಟದ ನಾಯಕರಾಗಿ ಬೆಳೆದದ್ದು ಒಂದು ಸಾಹಸಗಾಥೆ. ಅವರ ನಿಧನದಿಂದ ರಾಜ್ಯ ಮತ್ತು ರಾಷ್ಟ್ರ ಒಬ್ಬ ಅತ್ಯುತ್ತಮ ಜನನಾಯಕನನ್ನ ಕಳೆದುಕೊಂಡಂತಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ಕೊಡಲಿ. ಅವರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಚಿವ ಸುನಿಲ್ ಕುಮಾರ್ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
ಶಾಸಕ ಕೆ.ರಘುಪತಿ ಭಟ್
ಕೇಂದ್ರದ ಮಾಜಿ ಸಚಿವರು, ಹಿರಿಯ ಕಾಂಗ್ರೆಸ್ ನಾಯಕರಾದ ಆಸ್ಕರ್ ಫೆರ್ನಾಂಡಿಸ್ ನಿಧನರಾದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ. ಸರಳ ಸಜ್ಜನ ನಾಯಕರಾಗಿ ರಾಷ್ಟ್ರ ಮಟ್ಟದಲ್ಲಿ ತಮ್ಮ ಛಾಪನ್ನು ಬೆಳೆಸಿಕೊಂಡಿದ್ದರು. ದೇವರು ಅವರಿಗೆ ಸದ್ಗತಿ ನೀಡಲಿ, ಕುಟುಂಬದವರಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಉಡುಪಿ ಜಿಲ್ಲಾ ಕಾಂಗ್ರೆಸ್ ಸಂತಾಪ
ಉಡುಪಿ ನಗರಸಭೆಯ ಸದಸ್ಯರಾಗಿ ರಾಜಕೀಯ ಪ್ರವೇಶ ಮಾಡಿದ ಆಸ್ಕರ್ ಫೆರ್ನಾಂಡಿಸ್, 1980ರಲ್ಲಿ ಲೋಕಸಭೆಯ ಪ್ರವೇಶದೊಂದಿಗೆ ಕೇಂದ್ರದಲ್ಲಿ ಗಾಂಧಿ ಕುಟುಂಬಕ್ಕೆ ಆಪ್ತರಾಗಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.
1986ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. 5 ಬಾರಿ ಲೋಕಸಭಾ ಸದಸ್ಯರಾಗಿ, 4 ಬಾರಿ ರಾಜ್ಯಸಭಾ ಸದಸ್ಯರಾಗಿ, ರಾಜೀವ್ ಗಾಂಧಿಯವರ ಸಂಸದೀಯ ಕಾರ್ಯದರ್ಶಿಯಾಗಿ, ರಾಷ್ಟ್ರೀಯ ಹೆದ್ದಾರಿ, ಅಂಕಿಅಂಶ ಅನುಷ್ಟಾನ ಖಾತೆಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಉಡುಪಿ ಜಿಲ್ಲಾ ಕಾಂಗ್ರೆಸ್‌ಗೆ ಬೃಹತ್ ಕಾಂಗ್ರೆಸ್ ಭವನದ ಕೊಡುಗೆ ನೀಡಿ ಪಕ್ಷಕ್ಕೆ ಭದ್ರ ನೆಲೆಯನ್ನು ಒದಗಿಸಿಕೊಟ್ಟವರು ಆಸ್ಕರ್ ಫೆರ್ನಾಂಡಿಸ್.
ಕರಾವಳಿ ಭಾಗದಿಂದ ರಾಷ್ಟ್ರೀಯ ನಾಯಕರಾಗಿ ಬೆಳೆದು ಪಕ್ಷವನ್ನು ಮಾತೃ ಸ್ವರೂಪದಂತೆ ಕಂಡವರು ಆಸ್ಕರ್. ಕಾಂಗ್ರೆಸ್ ವಲಯದಲ್ಲಿ ಅಜಾತಶತ್ರುವಾಗಿ ಬೆಳಗಿದ ಆಸ್ಕರ್ ಅವರ ನಿಧನದಿಂದ ದೇಶ ಒಬ್ಬ ಸಹೃದಯಿ ರಾಜಕೀಯ ಮುಖಂಡನನ್ನು ಕಳೆದುಕೊಂಡಂತಾಗಿದೆ. ಉಡುಪಿ ಜಿಲ್ಲೆಯಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿ, ಮಾರ್ಗದರ್ಶಕರಾಗಿದ್ದ ಅವರ ಅಗಲಿಕೆ ಜಿಲ್ಲೆಗೆ ಹಾಗೂ ದೇಶಕ್ಕೆ ತುಂಬಲಾರದ ನಷ್ಟ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ, ಮಾಜಿ ಸಚಿವ ರಾದ ವಿನಯಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ರಾದ ಗೋಪಾಲ ಪೂಜಾರಿ, ಯು.ಆರ್. ಸಭಾಪತಿ, ಮುಖಂಡರಾದ ಎಂ.ಎ. ಗಫೂರ್, ದಿನೇಶ್ ಪುತ್ರನ್, ರಾಜು ಪೂಜಾರಿ, ನೀರೆಕೃಷ್ಣ ಶೆಟ್ಟಿ, ಬಿ. ನರಸಿಂಹ ಮೂರ್ತಿ, ಭಾಸ್ಕರ್ ರಾವ್ ಕಿದಿಯೂರು, ಉದ್ಯಾವರ ನಾಗೇಶ್ ಕುಮಾರ್, ಕುಶಲ್ ಶೆಟ್ಟಿ, ಮುರಳಿ ಶೆಟ್ಟಿ, ಅಣ್ಣಯ್ಯ ಸೇರಿಗಾರ್, ಜನಾರ್ದನ ತೋನ್ಸೆ, ಕೀರ್ತಿ ಶೆಟ್ಟಿ, ನವೀನ್‌ಚಂದ್ರ ಜೆ. ಶೆಟ್ಟಿ, ಹರೀಶ್ ಶೆಟ್ಟಿ ಪಾಂಗಾಳ ಹಾಗೂ ಜಿಲ್ಲಾ ಕಾಂಗ್ರೆಸ್ ಮುಖಂಡರು ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷರ ಸಂತಾಪ
ಮಾಜಿ ಕೇಂದ್ರ ಸಚಿವ, ಹಾಲಿ ರಾಜ್ಯಸಭಾ ಸದಸ್ಯ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಆಸ್ಕರ್ ಫೆರ್ನಾಂಡಿಸ್ ನಿಧನಕ್ಕೆ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.
ಯೋಗಾಭ್ಯಾಸದಲ್ಲಿ ವಿಶೇಷ ಪರಿಜ್ಞಾನ ಹೊಂದಿದ್ದ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಆಸ್ಕರ್ ಫೆರ್ನಾಂಡಿಸ್ ಸ್ನೇಹಜೀವಿಯಾಗಿದ್ದರು. ಅಗಲಿದ ಅವರ ದಿವ್ಯಾತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ ಎಂದು ಕುಯಿಲಾಡಿ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
ಜೆಡಿಎಸ್ ಜಿಲ್ಲಾಧ್ಯಕ್ಷರ ಸಂತಾಪ
ರಾಜ್ಯಸಭಾ ಸದಸ್ಯ, ಕೇಂದ್ರದ ಮಾಜಿ ಸಚಿವ, ಸರಳ ಸಜ್ಜನಿಕೆಯ ಧೀಮಂತ ನಾಯಕ ಆಸ್ಕರ್ ಫೆರ್ನಾಂಡಿಸ್ ಅವರ ಆತ್ಮಕ್ಕೆ ಸದ್ಗತಿ ನೀಡಲಿ, ಕುಟುಂಬದವರಿಗೆ ನೋವನ್ನು ಬರಿಸುವ ಶಕ್ತಿ ನೀಡಲಿ ಎಂದು ಉಡುಪಿ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ವಿ ಶೆಟ್ಟಿ ಸಂತಾಪ ಸೂಚಿಸಿದ್ದಾರೆ.
ಮಟ್ಟಾರ್ ಸಂತಾಪ
ಹಿರಿಯ ಕಾಂಗ್ರೆಸ್ ನಾಯಕ, ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರಾಗಿ ಸುದೀರ್ಘ ರಾಜಕೀಯ ಜೀವನದಲ್ಲಿ ಜನಪ್ರತಿನಿಧಿ ಯಾಗಿ ಕಾರ್ಯ ನಿರ್ವಹಿಸಿದ ಸರಳ ಸಜ್ಜನ ರಾಜಕಾರಣಿ ಆಸ್ಕರ್ ಪೆನಾರ್ಂಡಿಸ್ ಅವರ ನಿಧನಕ್ಕೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ತೀವ್ರ ಸಂತಾಪ ಸೂಚಿಸಿದ್ದಾರೆ.
ಕೇಂದ್ರ ಸರಕಾರದ ಮಾಜಿ ಸಚಿವರೂ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್‌ರವರ ನಿಧನಕ್ಕೆ ಬಿಜೆಪಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ, ಉಡುಪಿ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ವಿ.ಶೆಟ್ಟಿ, ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚ ಕಾರ್ಯದರ್ಶಿ ಎಂ.ಸಲೀಂ ಅಂಬಾಗಿಲು, ಬ್ರಹ್ಮಗಿರಿ ಹಾಶಿಮಿ ಮಸೀದಿಯ ಅಧ್ಯಕ್ಷ ಝಕ್ರಿಯಾ ಅಸ್ಸಾದಿ, ಸಾಮಾಜಿಕ ಕಾರ್ಯಕರ್ತ ಇಕ್ಬಾಲ್ ಮನ್ನಾ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಶಬ್ಬೀರ್ ಅಹ್ಮದ್ ಸಂತಾಪ ಸೂಚಿಸಿದ್ದಾರೆ.







