ಸಹಜ ಉದ್ಯೋಗದಿಂದ ದೇಶದ ಎಲ್ಲ ಸಮಸ್ಯೆಗಳಿಗೆ ಪರಿಹಾರ: ಪ್ರಸನ್ನ
ನಾಲ್ಕು ದಿನಗಳ ಕೈ ಉತ್ಪನ್ನಗಳ ಪ್ರದರ್ಶನ, ಕಾರ್ಯಾಗಾರಕ್ಕೆ ಚಾಲನೆ

ಉಡುಪಿ, ಸೆ.13: ಪರಂಪರೆ ಮತ್ತು ಆಧುನಿಕತೆಗಳು ಪ್ರತ್ಯೇಕಗೊಂಡಿರುವುದೇ ನಮ್ಮ ದೇಶದ ಬಹಳ ದೊಡ್ಡ ಸಮಸ್ಯೆಯಾಗಿವೆ. ಇವು ಎರಡರ ಒಳಿತನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಮಧ್ಯಮ ಮಾರ್ಗದ ಹುಡುಕಾಟದಲ್ಲಿ ನಾವಿದ್ದೇವೆ. ಪರಂಪರೆ ಮತ್ತು ಆಧುನಿಕತೆಯನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಬಹುಮುಖ್ಯ ದಾರಿ ಅಂದರೆ ಸಹಜ ಉದ್ಯೋಗ. ಈ ಸಹಜ ಉದ್ಯೋಗವನ್ನು ರಕ್ಷಿಸಿದರೆ ನಮ್ಮ ದೇಶದ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತದೆ ಎಂದು ರಂಗಕರ್ಮಿ ಪ್ರಸನ್ನ ಹೆಗ್ಗೋಡು ಹೇಳಿದ್ದಾರೆ.
ಶಿವಮೊಗ್ಗ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದ ವತಿಯಿಂದ ಪವಿತ್ರ ವಸ್ತ್ರ ಅಭಿಯಾನದ ಅಂಗವಾಗಿ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಇಂದು ನಡೆದ ನಾಲ್ಕು ದಿನಗಳ ಕೈ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ, ಪಡಿಯಚ್ಚು ಮುದ್ರಣ ಹಾಗೂ ಶಿಬೋರಿ ಬಣ್ಣಗಾರಿಕೆಯ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ದಿ.ಮುರಾರಿ ಬಲ್ಲಾಳ್ ನೆನಪಿನ ಸ್ವರಾಜ್ಯ ಹಾಗೂ ಗ್ರಾಮೋದ್ಯೋಗ ಕುರಿತು ಅವರು ಮಾತನಾಡುತಿದ್ದರು.
ಪರಂಪರೆ ಹಾಗೂ ಆಧುನಿಕತೆ ಮತ್ತು ವಿಜ್ಞಾನದಲ್ಲಿರುವ ಒಳ್ಳೆಯ ಗುಣಗಳು ಮೇಳೈಯಿಸಿ ಭಾರತ ದೇಶವನ್ನು ಕಟ್ಟಬೇಕಾಗಿದೆ. ಎಲ್ಲ ರಾಜಕೀಯ ಪಕ್ಷಗಳು ಪರಂಪರೆ ಮತ್ತು ಆಧುನಿಕತೆಯನ್ನು ಪ್ರತ್ಯೇಕಿಸಿ ನೋಡುತ್ತಿದ್ದಾರೆ. ಸಾಂಸ್ಕೃತಿಕವಾಗಿ ಮಾತನಾಡುವಾಗ ಪರಂಪರೆ ಹಾಗೂ ಪ್ರಗತಿ ಬಗ್ಗೆ ಮಾತನಾಡುವಾಗ ಯಂತ್ರಗಳ ಬಗ್ಗೆ ಮಾತನಾಡುತ್ತಾರೆ. ಇಡೀ ದೇಶದ ಆರ್ಥಿಕತೆಯನ್ನು ಯಂತ್ರ ಗಳನ್ನು ಬಳಸಿ ಕಟ್ಟುತ್ತೇವೆ ಎಂದು ರಾಜಕೀಯ ಪಕ್ಷಗಳು ಪ್ರತಿಪಾದಿಸುತ್ತಿದೆ. ಹೀಗೆ ಮಾಡುವುದರಿಂದ ಸಂಸ್ಕೃತಿ, ಜಾನಪದ, ಕೈ ಉತ್ಪನ್ನಗಳು, ಕನ್ನಡ, ತುಳು ಭಾೆಗಳು ಉಳಿಯಲು ಸಾಧ್ಯವಿಲ್ಲ ಎಂದರು.
ಶಿಕ್ಷಣ ಸಂಸ್ಥೆಗಳಲ್ಲಿ ಸಿಗುವ ವಿದ್ಯೆ ನಮ್ಮ ಶ್ರಮಗಳನ್ನು ಮರೆಸಿ ಬಿಡುತ್ತಿದೆ. ಆಧುನಿಕ ಶಿಕ್ಷಣ ಪದ್ಧತಿಯು ನಮಗೆ ಸುಲಭ ಜೀವಿಯಾಗುವಂತಹ ಭಯಾನಕ ರೋಗವನ್ನು ಬಡಿಸಲಿದೆ. ಕೇವಲ ಕುರ್ಚಿ ಮೇಲೆ ನಮ್ಮನ್ನು ಕೂರಿಸಿಬಿಡುತ್ತಿವೆ. ಆದುದರಿಂದ ಪ್ರತಿಯೊಬ್ಬರು ಆಧುನಿಕ ರೀತಿಯಲ್ಲಿ ಶ್ರಮವನ್ನು ಮೈಗೂಡಿಸಿ ಕೊಳ್ಳಬೇಕು. ಆ ಮೂಲಕ ಆರೋಗ್ಯವನ್ನು ಉಳಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಕಾರ್ಯಾಗಾರವನ್ನು ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ್ ನಾಯಕ್ ಉದ್ಘಾಟಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಾಲತಿ ದೇವಿ, ಅಖಿಲ ಭಾರತ ನೇಕಾರರ ಸಂಘದ ಅಧ್ಯಕ್ಷ ಪವನ್ ಉಪಸ್ಥಿತರಿ ದ್ದರು. ಅಭಿಯಾನದ ಮಾರುಕಟ್ಟೆ ವ್ಯವಸ್ಥಾಪಕಿ ಪದ್ಮಶ್ರೀ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಉಪನ್ಯಾಸಕ ಸುಚಿತ್ ಕೊೀಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.
ಪವಿತ್ರ ವಸ್ತ್ರ ಯೋಜನೆಯಡಿ ಸರಕಾರ ನಮ್ಮ ಸಂಸ್ಥೆಗೆ 33 ಲಕ್ಷ ರೂ. ಮಂಜೂರು ಮಾಡಿತ್ತು. ಆದರೆ ಆ ಹಣವನ್ನು ನಾವು ಕೆಲವೊಂದು ನಿಯಮ ಗಳಿಂದಾಗಿ ಪಡೆಯಲು ರೋಸಿ ಹೋದೆವು. ಕೊನೆಗೂ ಹಣ ಸಿಗದಿದ್ದಾಗ ಅದನ್ನು ನಾವು ವಾಪಾಸ್ಸು ಸರಕಾರಕ್ಕೆ ಕೊಟ್ಟಿದ್ದೇವೆ. ಅದಕ್ಕೆ ಬದಲು ನಾವು ಪವಿತ್ರ ವಸ್ತ್ರ ಅಭಿಯಾನದ ಮೂಲಕ ಗ್ರಾಹಕರ ಎದುರು ಬಂದು ನಮ್ಮ ವಸ್ತ್ರಗಳನ್ನು ಮಾರಾಟ ಮಾಡುತ್ತಿದ್ದೇವೆ. ಇದಕ್ಕೆ ಎಲ್ಲ ಕಡೆಗಳಲ್ಲೂ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ.
-ಪದ್ಮಶ್ರೀ, ಅಭಿಯಾನದ ಮಾರುಕಟ್ಟೆ ವ್ಯವಸ್ಥಾಪಕಿ
30 ಲಕ್ಷ ರೂ. ಮೌಲ್ಯದ ಸೊತ್ತುಗಳ ಪ್ರದರ್ಶನ
ಈ ಪ್ರದರ್ಶದಲ್ಲಿ ನೈಸರ್ಗಿಕ ಬಣ್ಣ, ಪರಿಶುದ್ಧ ಹತ್ತಿಯ ಕೈಮಗ್ಗದ ಬಟ್ಟೆ, ಸಿದ್ಧ ಉಡುಪುಗಳು, ಬ್ಯಾಗ್, ಬುಟ್ಟಿ, ಪರಿಸರ ಸ್ನೇಹಿ ಹಾಗೂ ಕೈ ಉತ್ಪನ್ನಗಳು, ಚೆನ್ನಪಟ್ಟಣದ ಆಟಿಕೆ ಸಾಮಾನುಳು, ಪುಸ್ತಕಗಳು ಲಭ್ಯ ಇವೆ.
ಉತ್ತರ ಕರ್ನಾಟಕ, ಬೆಳಗಾಂ, ಶಿವಮೊಗ್ಗ, ಉಡುಪಿ, ಚೆನ್ನಪಟ್ಟಣ ಸೇರಿದಂತೆ ರಾಜ್ಯದ ನಾನಾ ಕಡೆಗಳ ಒಟ್ಟು 16 ಸಂಸ್ಥೆಗಳು ಈ ಪ್ರದರ್ಶನದಲ್ಲಿ ತೊಡಗಿಸಿ ಕೊಂಡಿವೆ. 25ರೂ.ನಿಂದ ಹಿಡಿದು 7000ರೂ.ವರೆಗಿನ ಖಾದಿ ಬಟ್ಟೆಗಳು ಇಲ್ಲಿ ದೊರೆಯುತ್ತವೆ. ಒಟ್ಟು 30ಲಕ್ಷ ರೂ. ವೌಲ್ಯದ ವಸ್ತುಗಳ ಪ್ರದರ್ಶನ ಇಲ್ಲಿ ನಡೆಯುತ್ತಿವೆ.









