ಅಫ್ಘಾನ್ ಮಹಿಳೆಯರ ಹಕ್ಕನ್ನು ಗೌರವಿಸುವ ವಾಗ್ದಾನ ಮರೆತ ತಾಲಿಬಾನ್: ವಿಶ್ವಸಂಸ್ಥೆ ಟೀಕೆ

ವಿಶ್ವಸಂಸ್ಥೆ, ಸೆ.13: ಅಫ್ಘಾನಿಸ್ತಾನದಲ್ಲಿ ಅಧಿಕಾರ ಕೈವಶ ಮಾಡಿಕೊಂಡ ಬಳಿಕ ತಾಲಿಬಾನ್ ತನ್ನ ವಾಗ್ದಾನವನ್ನು ಮರೆತಂತೆ ವರ್ತಿಸುತ್ತಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿ ಅಧ್ಯಕ್ಷೆ ಮಿಶೆಲ್ ಮೈಕೆಲ್ ಬ್ಯಾಚೆಟ್ ಟೀಕಿಸಿದ್ದಾರೆ.
ಮಹಿಳೆಯರ ಹಕ್ಕನ್ನು ಗೌರವಿಸುವುದು ಸೇರಿದಂತೆ ಹಲವು ಭರವಸೆಗಳನ್ನು ತಾಲಿಬಾನ್ ವಿಶ್ವಸಮುದಾಯಕ್ಕೆ ನೀಡಿತ್ತು. ಆದರೆ ಈ ಬದ್ಧತೆಗೆ ವಿರುದ್ಧವಾಗಿ ಅವರು ನಡೆದುಕೊಳ್ಳುತ್ತಿದ್ದಾರೆ. ಮಹಿಳೆಯರನ್ನು ಸಾರ್ವಜನಿಕ ಕಾರ್ಯಕ್ಷೇತ್ರದಿಂದ ಹೊರಗಿಡಲಾಗಿದೆ. ತಮ್ಮ ಹಕ್ಕುಗಳ ಬಗ್ಗೆ ಮಹಿಳೆಯರು ಹಾಗೂ ಜನಾಂಗೀಯ ಗುಂಪುಗಳು ಆತಂಕಕ್ಕೆ ಒಳಗಾಗಿವೆಎಂದು ಅವರು ಹೇಳಿದ್ದಾರೆ.
ಪಶ್ತೂನ್ ಜನಾಂಗೀಯ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಮತ್ತು ಮಹಿಳೆಯರಿಗೆ ಪ್ರಾತಿನಿಧ್ಯ ಇಲ್ಲದ ನೂತನ ಸರಕಾರವನ್ನು ತಾಲಿಬಾನ್ ರಚಿಸುವ ಮೂಲಕ ತನ್ನ ವಾಗ್ದಾನವನ್ನು ಮರೆತಿದೆ. ಈ ಹಿಂದಿನ ಸರಕಾರದಲ್ಲಿ ಸೇವೆ ಸಲ್ಲಿಸುತ್ತಿದ್ದವರು ಹಾಗೂ ಭದ್ರತಾ ಪಡೆಯ ಸಿಬಂದಿಗಳಿಗೆ ಕ್ಷಮಾದಾನ ನೀಡುವ ಭರವಸೆಯನ್ನೂ ಉಲ್ಲಂಸಿ, ಮನೆಮನೆ ಶೋಧ ನಡೆಸಲಾಗುತ್ತಿದೆ ಎಂದವರು ಹೇಳಿದ್ದಾರೆ.





