ಸಾಬಿಯಾ ಅತ್ಯಾಚಾರ, ಹತ್ಯೆ ಪ್ರಕರಣ: ವಿಐಎಂ ಖಂಡನೆ

ಮಂಗಳೂರು, ಸೆ.13: ದೆಹಲಿಯ ಸಿವಿಲ್ ಡಿಫೆನ್ಸ್ ಪೊಲೀಸ್ ಅಧಿಕಾರಿ ಸಾಬಿಯಾ ಸೈಫಿ ಅವರ ಅತ್ಯಾಚಾರ ಹಾಗೂ ಬರ್ಬರ ಹತ್ಯೆಯನ್ನು ಖಂಡಿಸಿ ವಿಮೆನ್ ಇಂಡಿಯಾ ಮೂವ್‌ಮೆಂಟ್ ದ.ಕ. ಜಿಲ್ಲಾ ಘಟಕದಿಂದ ನಗರದ ಮಿನಿ ವಿಧಾನ ಸೌಧದ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ವಿಐಎಂ ರಾಜ್ಯಾಧ್ಯಕ್ಷೆ ಶಾಹಿದಾ ತಸ್ನೀಂ ಮಾತನಾಡಿ, 21ರ ಹರೆಯದ ಯುವತಿಯನ್ನು ಅಪಹರಿಸಿ ಅತ್ಯಾಚಾರ ಎಸಗಿ 60ಕ್ಕೂ ಹೆಚ್ಚು ಬಾರಿ ಇರಿದು ಬರ್ಬರವಾಗಿ ಹತ್ಯೆಗೈದು ಪೈಶಾಚಿಕ ಕೃತ್ಯ ಎಸಗಿರುವುದು ಖಂಡನೀಯ. ಭ್ರಷ್ಟಾಚಾರದೊಂದಿಗೆ ಥಳಕು ಹಾಕಿಕೊಂಡಿರುವ ಈ ಪ್ರಕರಣವನ್ನು ಮುಚ್ಚಿ ಹಾಕಲು, ಆರೋಪಿಗಳನ್ನು ರಕ್ಷಿಸಲು ಪೊಲೀಸ್ ಇಲಾಖೆ ಹಾಗೂ ಕೆಲವು ಮಾಧ್ಯಮಗಳು ಪ್ರಯತ್ನಿಸುತ್ತಿವೆ. ಸರಕಾರದ ಮೌನವು ಇದಕ್ಕೆ ಇನ್ನಷ್ಟು ಪುಷ್ಠಿ ನೀಡುತ್ತಿದೆ ಎಂದರು.
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಮಂಗಳೂರು ಜಿಲ್ಲಾ ಮುಖಂಡರಾದ ಝಕಿಯಾ ಮಾತನಾಡಿ, ನ್ಯಾಯಾಲಯದ ವಿಳಂಬ ನೀತಿಗಳು ಮಹಿಳಾ ದೌರ್ಜನ್ಯ ಹೆಚ್ಚಲು ಪ್ರಮುಖ ಕಾರಣವಾಗಿದೆ. ಸರಕಾರ ಇಂತಹದ್ದವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಸರಕಾರ ಈ ಪ್ರಕರಣವನ್ನು ಎಸ್‌ಐಟಿಗೆ ವಹಿಸಬೇಕು ಎಂದು ಆಗ್ರಹಿಸಿದರು.
ವಿಐಎಂ ಜಿಲ್ಲಾಧ್ಯಕ್ಷೆ ನಸ್ರಿಯಾ ಬೆಳ್ಳಾರೆ ಹಾಗೂ ಪ್ರಧಾನ ಕಾರ್ಯದರ್ಶಿ ಝಹನಾ ಬಂಟ್ವಾಳ ಮಾತನಾಡಿದರು. ವಿಐಎಂ ಜಿಲ್ಲಾ ಸಮಿತಿ ಸದಸ್ಯೆ ಅಡ್ವೋಕೇಟ್ ರುಬಿಯಾ ಕಾರ್ಯಕ್ರಮ ನಿರೂಪಿಸಿದರು.







