ಅಕ್ಟೋಬರ್ ನಿಂದ ಭತ್ತ ಖರೀದಿ ಸಂದರ್ಭ ಕೇಂದ್ರದಿಂದ ರೈತರ ಭೂದಾಖಲೆಗಳ ಪರಿಶೀಲನೆ
ಹೊಸದಿಲ್ಲಿ, ಸೆ. 13: ಕನಿಷ್ಠ ಬೆಂಬಲ ಬೆಲೆ ವ್ಯಾಪಾರಿಗಳಿಗೆ ತಲುಪದೆ ರೈತರಿಗೆ ತಲುಪುವುದನ್ನು ಖಾತರಿಪಡಿಸುವ ಪ್ರಯತ್ನವಾಗಿ ಮುಂದಿನ ತಿಂಗಳಿಂದ ಭತ್ತ ಖರೀದಿಸುವ ಮೊದಲು ಭೂ ದಾಖಲೆಗಳನ್ನು ಹೋಲಿಸಿ ನೋಡಲು ಕೇಂದ್ರ ಸರಕಾರ ಮೊದಲ ಬಾರಿಗೆ ನಿರ್ಧರಿಸಿದೆ ಎಂದು ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಸೋಮವಾರ ಹೇಳಿದ್ದಾರೆ.
ಈ ಉದ್ದೇಶಕ್ಕಾಗಿ ಅಸ್ಸಾಂ ಹಾಗೂ ಉತ್ತರಾಖಂಡ ರಾಜ್ಯಗಳನ್ನು ಹೊರತಪಡಿಸಿ ಉಳಿದ ಬಹುತೇಕ ಭತ್ತ ಖರೀದಿ ರಾಜ್ಯಗಳು ಕೇಂದ್ರದ ನೋಡಲ್ ಖರೀದಿ ಸಂಸ್ಥೆ ಭಾರತ ಆಹಾರ ನಿಗಮ (ಎಫ್ಸಿಐ)ದೊಂದಿಗೆ ಸಮಗ್ರ ಡಿಜಿಟಲ್ ಭೂ ದಾಖಲೆಗಳನ್ನು ಸಂಯೋಜಿಸಲು ಸಿದ್ಧವಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ರೈತರ ಶ್ರೇಯಸ್ಸಿನ ಉದ್ದೇಶ ಹೊಂದಿರುವ ಈ ನೂತನ ವ್ಯವಸ್ಥೆಯನ್ನು ಸಮರ್ಥಿಸಿಕೊಂಡ ಪಾಂಡೆ, ತಮ್ಮ ಸ್ವಂತ ಅಥವಾ ಗೇಣಿ ಭೂಮಿಯಲ್ಲಿ ರೈತರು ಬೆಳೆಸಿದ ಭತ್ತವನ್ನು ಸರಕಾರ ಖರೀದಿಸಲಿದೆ ಎಂದಿದ್ದಾರೆ. ‘‘ರೈತರು ಸ್ವಂತ ಭೂಮಿ ಹೊಂದಿದ್ದಾರೋ ಇಲ್ಲವೋ ಎಂಬುದು ಮುಖ್ಯವಲ್ಲ. ರೈತರು ಯಾವುದೇ ಭೂಮಿಯಲ್ಲಿ ಬೆಳೆಸಿದ ಬೆಳೆಯನ್ನು ಖರೀದಿಸಲಾಗುವುದು’’ ಎಂದು ಅವರು ತಿಳಿಸಿದರು.
ಯಾವ ಪ್ರದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ಬೆಳೆ ಬೆಳೆಸಿದ್ದಾರೆ ಎಂಬುದನ್ನು ಪರಿಶೀಲಿಸುವುದು ಹಾಗೂ ಅದಕ್ಕನುಗುಣವಾಗಿ ಖರೀದಿ ಇದರ ಮುಖ್ಯ ಉದ್ದೇಶ ಎಂದು ಹೇಳಿದ ಅವರು, ಎಫ್ಸಿಐಯೊಂದಿಗೆ ಸಮಗ್ರ ಕೇಂದ್ರೀಕೃತ ಡಿಜಿಟಲ್ ಭೂ ದಾಖಲೆಗಳ ಸಂಯೋಜನೆ ಭತ್ತ ಖರೀದಿಸುವ ಪ್ರಕ್ರಿಯ ಸಂದರ್ಭ ನೆರವು ನೀಡಲಿದೆ ಎಂದರು. ಪ್ಯಾಪಾರಿಗಳಿಗೆ ಬದಲಾಗಿ ಪ್ರಾಮಾಣಿಕ ರೈತರಿಂದ ಸರಕಾರ ಭತ್ತ ಖರೀದಿಸುವುದು ಈ ವ್ಯವಸ್ಥೆಯ ಹಿಂದಿನ ಮುಖ್ಯ ಉದ್ದೇಶ ಎಂದು ಸುಧಾಂಶು ಪಾಂಡೆ ಹೇಳಿದರು.







