ಕೋವಿಡ್ ಲಸಿಕೆ ವಿತರಣೆಗೆ ಡ್ರೋನ್ ಬಳಕೆಗೆ ಐಸಿಎಂಆರ್ ಗೆ ಅನುಮತಿ
ಚೆನ್ನೈ, ಸೆ. 13: ಅಂಡಮಾನ್ ಹಾಗೂ ನಿಕೋಬಾರ್ ದ್ವೀಪ, ಮಣಿಪುರ, ನಾಗಾಲ್ಯಾಂಡ್ ಗೆ ಲಸಿಕೆ ಪೂರೈಸಲು ದೃಷ್ಟಿ ವ್ಯಾಪ್ತಿಯ ದೂರದ ಒಳಗೆ ಡ್ರೋನ್ ಬಳಸಲು ಭಾರತೀಯ ವೈದ್ಯಕೀಯ ಸಂಶೋಧನೆ ಮಂಡಳಿ (ಐಸಿಎಂಆರ್)ಗೆ ಶರತ್ತುಬದ್ದ ಅನುಮತಿ ನೀಡಲಾಗಿದೆ ಎಂದು ನಾಗರಿಕ ವಿಮಾನ ಸಚಿವಾಲಯ ಸೋಮವಾರ ತಿಳಿಸಿದೆ.
ಲಸಿಕೆ ವಿತರಿಸಲು 3,000 ಮೀಟರ್ ಎತ್ತರದ ವರೆಗೆ ಡ್ರೋನ್ ಬಳಸಲು ಐಸಿಎಂಆರ್ಗೆ ಅನುಮತಿ ನೀಡಲಾಗಿದೆ ಎಂದು ನಾಗರಿಕ ವಿಮಾನ ಯಾನ ಸಚಿವಾಲಯದ ಹೇಳಿಕೆ ತಿಳಿಸಿದೆ. ಡ್ರೋನ್ ಗಳನ್ನು ಬಳಸಿ ಔಷಧ ಹಾಗೂ ಲಸಿಕೆಗಳನ್ನು ವಿತರಿಸಲು ತೆಲಂಗಾಣದ ವಿಕರಬಾದ್ ನಲ್ಲಿ ತನ್ನ ಈ ರೀತಿಯ ಮೊದಲ ‘ಆಗಸದಿಂದ ಔಷಧ’ ಯೋಜನೆಯನ್ನು ಎರಡು ದಿನಗಳ ಹಿಂದೆ ಕೇಂದ್ರ ನಾಗರಿಕ ವಿಮಾನ ಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಉದ್ಘಾಟಿಸಿದ್ದರು. ಸಂಶೋಧನೆ, ಅಭಿವೃದ್ಧಿ ಹಾಗೂ ಪರೀಕ್ಷೆ ನಡೆಸುವ ಉದ್ದೇಶಕ್ಕೆ ತನ್ನ ಕಂಪೌಂಡ್ ಒಳಗೆ ಡ್ರೋನ್ ಗಳನ್ನು ಬಳಸಲು ಮುಂಬೈಯ ಐಐಟಿ ಶರತ್ತುಬದ್ಧ ಅನುಮತಿ ಪಡೆದುಕೊಂಡಿರುವುದನ್ನು ಸಚಿವಾಲಯ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ.
Next Story





