ಪೆಗಾಸಸ್ : ತನಿಖಾ ವಿಧಾನ ಬಗೆಗಿನ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ : ಬೇಹುಗಾರಿಕೆಗೆ ಪೆಗಾಸಸ್ ಸ್ಪೈವೇರ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ನಡೆಸುವ ತನಿಖೆಯ ಸ್ವರೂಪಕ್ಕೆ ಸಂಬಂಧಿಸಿದಂತೆ ಈ ವಾರ ತೀರ್ಪು ನೀಡುವುದಾಗಿ ಸೋಮವಾರ ಪ್ರಕಟಿಸಿದೆ. ಎರಡು ಬಾರಿ ಸಮಯ ಪಡೆದ ಬಳಿಕವೂ ವಿವರವಾದ ಅಫಿಡವಿಟ್ ಸಲ್ಲಿಸದ ಕೇಂದ್ರ ಸರ್ಕಾರದ ಕ್ರಮದ ಬಗ್ಗೆ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ತನಿಖೆಗೆ ಸ್ವತಂತ್ರ ತಾಂತ್ರಿಕ ಸಮಿತಿಯನ್ನು ರಚಿಸಲು ಸಿದ್ಧ ಎಂದಷ್ಟೇ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.
ಅಫಿಡವಿಟ್ ಸಲ್ಲಿಸುವ ವಿಚಾರದಲ್ಲಿ ಹಾಗೂ ಭಾರತದ ವಿರೋಧಿಗಳ ಪರಸ್ಪರ ಸಂವಹನ ಮತ್ತು ಉಗ್ರ ಸಂಘಟನೆಗಳು ಸ್ಲೀಪರ್ ಸೆಲ್‌ಗಳ ಜತೆ ನಡೆಸುವ ಮಾತುಕತೆಯನ್ನು ಭೇಧಿಸಲು ಸರ್ಕಾರಿ ಏಜೆನ್ಸಿಗಳು ಬಳಸುವ ಸಾಫ್ಟ್‌ವೇರ್ ವಿವರಗಳನ್ನು ಸಾರ್ವಜನಿಕ ಡೊಮೈನ್‌ಗಳಲ್ಲಿ ಬಹಿರಂಗಪಡಿಸುವುದರಿಂದ ಎದುರಾಗುವ ಸಂಕಷ್ಟದ ಬಗ್ಗೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೋರ್ಟ್‌ಗೆ ವಿವರಿಸಿದರು.
ಈ ನಿಲುವಿಗೆ ಬದ್ಧವಾಗಿ ಕೇಂದ್ರ ಸರ್ಕಾರ ಆಗಸ್ಟ್ 17ರಂದು ಸಂಕ್ಷಿಪ್ತ ಅಫಿಡವಿಟ್ ಸಲ್ಲಿಸಿದೆ. ಆ ದಿನ ವಿವರವಾದ ಪ್ರತಿಕ್ರಿಯೆ ನೀಡುವಂತೆ ಸೂಚಿಸಿ ಸುಪ್ರೀಂಕೋರ್ಟ್ ನೋಟಿಸ್ ನೀಡಿತ್ತು. ಇಂಥ ಅಫಿಡವಿಟ್ ಸಲ್ಲಿಸಬೇಕೇ ಅಥವಾ ಸಲ್ಲಿಸಬೇಡವೇ ಎಂಬ ಬಗ್ಗೆ ನಿರ್ಧರಿಸಲು ಕಾಲಾವಕಾಶ ನೀಡುವಂತೆ ಕೋರಿ ಸೆಪ್ಟೆಂಬರ್ 7ರಂದು ಮತ್ತೆ ಸಮಯಾವಕಾಶ ಕೇಳಲಾಗಿತ್ತು.
"ಸರ್ಕಾರ ಅಫಿಡವಿಟ್ ಸಲ್ಲಿಸಬಹುದು ಎಂದು ನಾವು ಭಾವಿಸಿದ್ದೆವು; ಇದನ್ನು ಆಧರಿಸಿ ಹೇಗೆ ಮುಂದುವರಿಯಬೇಕು ಎನ್ನುವುದನ್ನು ನಾವು ನಿರ್ಧರಿಸುತ್ತೇವೆ. ಇದೀಗ ಕೇಂದ್ರ ಹೇಳಿಕೆ ನೀಡಿದೆ. ಆದ್ದರಿಂದ ಮಧ್ಯಂತರ ಆದೇಶ ನೀಡಬೇಕೇ ಅಥವಾ ಆದೇಶ ನೀಡಬೇಕೇ ಎನ್ನುವುದನ್ನು ಪರಿಶೀಲಿಸಲಿದ್ದೇವೆ" ಎಂದು ಸಿಜೆಐ ಎನ್.ವಿ. ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಹಿಮಾ ಕೊಹ್ಲಿ ಅವರನ್ನೊಳಗೊಂಡ ನ್ಯಾಯಪೀಠ ಸ್ಪಷ್ಟಪಡಿಸಿತು.







