ಆಸ್ಕರ್ ಫೆರ್ನಾಂಡಿಸ್, ಸಂಚಾರಿ ವಿಜಯ್‍ಗೆ ಸದನದಲ್ಲಿ ಶ್ರದ್ಧಾಂಜಲಿ

ಬೆಂಗಳೂರು, ಸೆ.13: ರಾಜ್ಯಸಭಾ ಸದಸ್ಯ, ಕಾಂಗ್ರೆಸ್ ಹಿರಿಯ ಮುಖಂಡ ಆಸ್ಕರ್ ಫೆರ್ನಾಂಡಿಸ್ ಹಾಗೂ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ಅವರಿಗೆ ವಿಧಾನಸಭೆಯಲ್ಲಿ ಸಂತಾಪ ಸೂಚಿಸಲಾಯಿತು.
ಸ್ಪೀಕರ್ ವಿಶ್ವೇಶರ ಹೆಗಡೆ ಕಾಗೇರಿ ಸಂತಾಪ ಸೂಚಕ ನಿರ್ಣಯ ಮಂಡಿಸಿದರು. ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, 'ಸರಳ ಮತ್ತು ಕಠಿಣ ಪರಿಶ್ರಮಿಯಾಗಿದ್ದ ಆಸ್ಕರ್ ಫೆರ್ನಾಂಡಿಸ್ ಅವರು ಸಾಮಾನ್ಯ ವ್ಯಕ್ತಿಯನ್ನು ಕೂಡ ಗೌರವದಿಂದ ನೋಡಿಕೊಳ್ಳುವ ಸೌಜನ್ಯ ಅವರಲ್ಲಿತ್ತು. ರಾಜಕಾರಣದ ಜೊತೆ ರಂಗಭೂಮಿ, ಸಂಗೀತದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು' ಎಂದರು.
ನಿಷ್ಠಗೆ ಇನ್ನೊಂದು ಹೆಸರೇ ಆಸ್ಕರ್ ಫೆರ್ನಾಂಡಿಸ್ ಎಂದ ಅವರು, ತಾನು ವಿಧಾನಪರಿಷತ್ ಸದಸ್ಯರಾಗಿದ್ದಾಗ ಫೆರ್ನಾಂಡಿಸ್ ಅವರ ದಿಲ್ಲಿ ಭೇಟಿ ಬಗ್ಗೆ ನೆನಪಿಸಿಕೊಂಡರು.
'ನಾನು ಅವನಲ್ಲ ಅವಳು ಚಿತ್ರದ ಖ್ಯಾತಿಯ ನಟ ಸಂಚಾರಿ ವಿಜಯ್ ಒಬ್ಬ ಪ್ರತಿಭಾವಂತ ನಟನಾಗಿ ಸಮಾಜ ಸೇವೆಯಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದರು. ಅವರ ಅಗಲುವಿಕೆ ಆಘಾತ ಉಂಟು ಮಾಡಿತ್ತು' ಎಂದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಆಸ್ಕರ್ ಫೆರ್ನಾಂಡಿಸ್ ಅವರು ಉಡುಪಿ ಮುನ್ಸಿಪಲ್ ಸದ್ಯರಾಗಿದ್ದ ಅವರು ರಾಷ್ಟ್ರ ನಾಯಕರಾಗಿ ಬೆಳೆದಿದ್ದರು. ಸತತವಾಗಿ ಈದು ಬಾರಿ ಮತ್ತು ರಾಜ್ಯಸಭೆಗೆ ನಾಲ್ಕುಬಾರಿ ಆಯ್ಕೆಯಾಗಿದ್ದು, ಅಷ್ಟೊಂದು ಸುದೀರ್ಘವಾಗಿ ಸಂಸತ್ ಸದಸ್ಯರಾಗಿದ್ದವರಲ್ಲಿ ಆಸ್ಕರ್ ಫೆರ್ನಾಂಡಿಸ್ ಕೂಡ ಒಬ್ಬರು ಎಂದು ತಿಳಿಸಿದರು.
ತಾನು ಕಾಂಗ್ರೆಸ್ ಪಕ್ಷ ಸೇರುವಾಗ ಆತ್ಮೀಯವಾಗಿ ಮತ್ತು ಅಭಿಮಾನದಿಂದ ಸ್ವಾಗತಿಸಿ ನನಗೆ ಮಾರ್ಗದರ್ಶನ ನೀಡಿದ್ದರು ಎಂದು ಸಿದ್ದರಾಮಯ್ಯ ಅವರು ಆಸ್ಕರ್ ಫೆರ್ನಾಂಡಿಸ್ ಅವರನ್ನು ಸ್ಮರಿಸಿಕೊಂಡರು.
ಸಂಚಾರಿ ವಿಜಯ್ ಅವರ 'ನಾನು ಅವನಲ್ಲ ಅವಳು' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ದೊರಕಿದೆ. ಲಾಕ್ ಡೌನ್ ಸಂದರ್ಭದಲ್ಲಿ ಅವರು ನಡೆಸಿದ ಮಾನವೀಯ ಕಾರ್ಯ ಶ್ಲಾಘನೀಯ ಎಂದ ಅವರು, ಪ್ರತಿಭಾವಂತ ನಟನ ಅಗಲುವಿಕೆಯಿಂದ ಕನ್ನಡ ಚಿತ್ರ ರಂಗ ಬಡವಾಗಿದೆ ಎಂದು ಹೇಳಿದರು.
ಸಚಿವ ಜೆ.ಸಿ ಮಾಧುಸ್ವಾಮಿ, ಆರ್.ವಿ ದೇಶಪಾಂಡೆ, ಕೆ.ಜೆ ಜಾರ್ಜ್ ಮಾತನಾಡಿದರು.







