ಉತ್ತರಪ್ರದೇಶದಲ್ಲಿ ಡೆಂಗೀ ಹಾವಳಿ: ತಂಗಿಯನ್ನು ಉಳಿಸಲು ಸಹೋದರಿ ಅಂಗಲಾಚಿದರೂ ರೋಗಕ್ಕೆ ಬಲಿಯಾದ 11ರ ಬಾಲಕಿ

ಲಕ್ನೋ: ಡೆಂಗೀ ಜ್ವರದಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ತನ್ನ 11 ವರ್ಷದ ಸೋದರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಆಗ್ರಹಿಸಿ ಫಿರೋಝಾಬಾದ್‍ನ 20 ವರ್ಷದ ಯುವತಿ ನಿಕಿತಾ ಕುಶ್ವಾ ಆಗ್ರಾ ವಿಭಾಗೀಯ ಆಯುಕ್ತ ಅಮಿತ್ ಗುಪ್ತಾ ಅವರ ಕಾರಿಗೆ ಅಡ್ಡಲಾಗಿ ರಸ್ತೆಯಲ್ಲಿ ಕುಳಿತು ಪಿರೋಝಾಬಾದ್ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ತಂಗಿಗೆ ಸೂಕ್ತ ಚಿಕಿತ್ಸೆಗಾಗಿ ಅಂಗಲಾಚುತ್ತಿರುವ ವೀಡಿಯೋ ಎಂತಹವರ ಮನ ಕಲಕುತ್ತದೆ. ಈ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ನಿಕಿತಾ ಸೋದರಿ ಡೆಂಗೀಗೆ ಬಲಿಯಾಗಿದ್ದಾಳೆ.
"ಸರ್, ಏನಾದರೂ ಮಾಡಿ, ಆಕೆ ಸಾಯುತ್ತಾಳೆ, ಆಕೆಗೆ ಸೂಕ್ತ ಚಿಕಿತ್ಸೆ ಒದಗಿಸಿ" ಎಂದು ನಿಕಿತಾ ಇದಕ್ಕೂ ಮುಂಚೆ ಅಧಿಕಾರಿಯನ್ನು ಅಂಗಲಾಚಿದ್ದಳಲ್ಲದೆ ಅಲ್ಲಿಂದ ಕದಲುವುದಿಲ್ಲ ಎಂದಿದ್ದರೂ ಇಬ್ಬರು ಮಹಿಳಾ ಪೊಲೀಸ್ ಸಿಬ್ಬಂದಿ ಆಕೆಯನ್ನು ಅಲ್ಲಿಂದ ಎಳೆದೊಯ್ದಿದ್ದಾರೆ.
ಫಿರೋಝಾಬಾದ್‍ನ ಆಸ್ಪತ್ರೆಯಲ್ಲಿ ಸಾಕಷ್ಟು ಚಿಕಿತ್ಸಾ ಸೌಲಭ್ಯಗಳೂ ಇಲ್ಲ ಎಂದು ಆಕೆ ದೂರಿದ್ದರು.
ತನ್ನ ಸೋದರಿ ವೈಷ್ಣವಿಗೆ ಸೂಕ್ತ ಚಿಕಿತ್ಸೆ ದೊರೆಯದೇ ಇದ್ದುದರಿಂದ ಆಕೆ ಮೃತಪಟ್ಟಳು ಎಂದು ಹೇಳುವ ನಿಕಿತಾ ಈ ಕುರಿತು ತನಿಖೆ ನಡೆಸುವಂತೆ ಹಾಗೂ ಸಂಬಂಧಿತ ವೈದ್ಯರನ್ನು ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ.
"ಆದರೆ ಆಕೆಯನ್ನು ಉಳಿಸಲು ಎಲ್ಲಾ ಪ್ರಯತ್ನ ನಡೆಸಲಾಯಿತು. ಆಕೆಯ ಲಿವರ್ ಊದಿಕೊಂಡಿತ್ತು, ಹೊಟ್ಡೆಯಲ್ಲಿ ದ್ರವ ತುಂಬಿಕೊಂಡಿತ್ತು, ಆಕೆಯನ್ನು ವೆಂಟಿಲೇಟರ್‍ನಲ್ಲಿರಿಸಲಾಯಿತು. ನಮ್ಮೆಲ್ಲಾ ಪ್ರಯತ್ನಗಳ ಹೊರತಾಗಿಯೂ ಆಕೆಯನ್ನು ಉಳಿಸಿಕೊಳ್ಳಲಾಗಿಲ್ಲ" ಎಂದು ಫಿರೋಝಾಬಾದ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲೆ ಡಾ ಸಂಗೀತಾ ಅನೇಜ ಹೇಳಿದ್ದಾರೆ.
ಫಿರೋಝಾಬಾದ್‍ನಲ್ಲಿ ಇಲ್ಲಿಯ ತನಕ ಡೆಂಗೀಗೆ 60 ಜನರು ಬಲಿಯಾಗಿದ್ದು, ಸೂಕ್ತ ಚಿಕಿತ್ಸೆಗಾಗಿ ಯೋಗಿ ಸರಕಾರ ಕ್ರಮಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.







