ಸೆ.17ರಂದು ಮೆಗಾ ಲಸಿಕಾ ಮೇಳ : ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ

ಮಂಗಳೂರು, ಸೆ.14: ದ.ಕ. ಜಿಲ್ಲೆಯು ಕೋವಿಡ್ ವಿರುದ್ಧದ ಲಸಿಕೀಕರಣದಲ್ಲಿ ರಾಜ್ಯದಲ್ಲಿ ಪ್ರಸಕ್ತ 4ನೆ ಸ್ಥಾನದಲ್ಲಿದ್ದು, ಸೆ. 17ರಂದು ಮೆಗಾ ಲಸಿಕಾ ಮೇಳದ ಮೂಲಕ 1.50 ಲಕ್ಷ ಡೋಸ್ ಲಸಿಕೆ ನೀಡಲು ಸಿದ್ಧತೆ ನಡೆಸಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ಈವರೆಗೆ ಶೇ. 80ರಷ್ಟು ಮಂದಿ ಪ್ರಥಮ ಡೋಸ್ ಪಡೆದಿದ್ದಾರೆ. ಸುಮಾರು 56,000 ಮಂದಿ ಪ್ರಸಕ್ತ ಎರಡನೆ ಡೋಸ್ ಪಡೆಯಲು ಅರ್ಹತೆ ಪಡೆದಿದ್ದಾರೆ. ಸೆ. 17ರಂದು ಈವರೆಗೆ ಪ್ರಥಮ ಲಸಿಕೆ ಪಡೆಯದವರೆಲ್ಲರೂ ಲಸಿಕೆ ಪಡೆಯುವುದನ್ನು ಖಾತರಿಪಡಿಸುವುದು ಆದ್ಯತೆಯಾಗಿದೆ ಎಂದರು.
ದ.ಕ. ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿಯೂ ಜಿಲ್ಲಾಡಳಿತದ ಮೂಲಕ ಉಚಿತವಾಗಿ ಆ ದಿನ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ. ಒಟ್ಟು 500 ಕೇಂದ್ರಗಳ ಮೂಲಕ ಅಂದು ಲಸಿಕೆ ನೀಡುವ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾ ಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮಂಗಳೂರು ನಗರದಲ್ಲಿ 40,000, ಮುಲ್ಕಿ- 10000, ಮೂಡಬಿದ್ರೆ- 15000, ಸುಳ್ಯ, 10,000 ಹಾಗೂ ಉಳ್ಳಾಲ, ಬಂಟ್ವಾಳ, ಬೆಳ್ತಂಗಡಿ ಮತ್ತು ಪುತ್ತೂರಿನಲ್ಲಿ ತಲಾ 20,000 ದಂತೆ ಅಂದು ಲಸಿಕೆ ನೀಡುವ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ತಿಳಿಸಿದರು.
ಗೋಷ್ಠಿಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್, ವೆನ್‌ಲಾಕ್ ಅಧೀಕ್ಷಕ ಡಾ. ಸಾಶಿವ ಶ್ಯಾನುಭಾಗ್ ಉಪಸ್ಥಿತರಿದ್ದರು.







