ಆಸ್ಕರ್ ಫರ್ನಾಂಡಿಸ್ ನನ್ನ 'ಪೊಲಿಟಿಕಲ್ ಗಾಡ್‍ಫಾದರ್': ನೆನಪು ಬಿಚ್ಚಿಟ್ಟ ಸಂಸದ ವಿ.ಶ್ರೀನಿವಾಸ್ ಪ್ರಸಾದ್

ಮೈಸೂರು,ಸೆ.14: 1980ರಲ್ಲಿ ಪ್ರಥಮ ಬಾರಿಗೆ ಉಡುಪಿ ಲೋಕಸಭಾ ಕ್ಷೇತ್ರದಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ ಆಸ್ಕರ್ ಫರ್ನಾಂಡಿಸ್ ಸತತವಾಗಿ 5 ಬಾರಿ ಸಂಸತ್ ಸದಸ್ಯರಾಗಿ, 4 ಬಾರಿ ರಾಜ್ಯಸಭಾ ಸದಸ್ಯರಾಗಿ, ಕೇಂದ್ರ ಸಚಿವರಾಗಿ ಅವರು ನಿರ್ವಹಿಸಿದ ಕಾರ್ಯ ಅವಿಸ್ಮರಣೀಯ. ದಿವಂಗತ ರಾಜೀವ್ ಗಾಂಧಿ ಅವರು ಪ್ರಧಾನಮಂತ್ರಿಯಾಗಿದ್ದಾಗ ಆಸ್ಕರ್ ಫರ್ನಾಂಡಿಸ್ ಅವರು ಸಂಸದೀಯ ಕಾರ್ಯದರ್ಶಿಯಾಗಿ ಕೂಡ ಕಾರ್ಯನಿರ್ವಹಿಸಿದ್ದರು ಎಂದು ಸಂಸದ ವಿ.ಶ್ರೀನಿಸಾಸ್ ಪ್ರಸಾದ್ ಕಂಬನಿ ಮಿಡಿದಿದ್ದಾರೆ.
ಕಾಂಗ್ರೆಸ್ ಪಕ್ಷದ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ, ಜಂಟಿ ಕಾರ್ಯದರ್ಶಿಯಾಗಿ, ಕಾಂಗ್ರೆಸ್ ಪಕ್ಷದ ಕೇಂದ್ರ ಚುನಾವಣಾ ಮಂಡಳಿಯ ಸದಸ್ಯರಾಗಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಪ್ರಮುಖ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ದಿವಂಗತ ರಾಜೀವ್ ಗಾಂಧಿ ಅವರೊಡನೆ ಅವರು ನಿಕಟ ಸಂಪರ್ಕ ಹೊಂದಿ ಅವರ ಆಪ್ತ ವಲಯದಲ್ಲಿ ಅತ್ಯಂತ ಗಾಢವಾದ ವಿಶ್ವಾಸ ಸಂಪಾದಿಸಿದ್ದರು ಎಂದು ತಿಳಿಸಿದರು.
1980ರಲ್ಲಿ ಪ್ರಥಮ ಬಾರಿಗೆ ಅವರು ಉಡುಪಿಯಿಂದ, ನಾನು ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಪ್ರಥಮಬಾರಿಗೆ ಸಂಸತ್ ಪ್ರವೇಶಿಸಿದ್ದೆವು. ನವ-ದೇಹಲಿಯ ಕಸ್ತೂರಬಾಗಾಂಧಿ ಮಾರ್ಗದ ಹಾಸ್ಟೆಲ್‍ನಲ್ಲಿ ನಾವಿಬ್ಬರು ಒಟ್ಟಿಗೆ ವಾಸ್ತವ್ಯ ಹೂಡಿದ್ದೆವು. ಅಂದಿನಿಂದ ನಾವಿಬ್ಬರು ಸಹೋದರರಂತೆ ಕೂಡಿ ಬೆಳೆದೆವು. ನಂತರ ದೆಹಲಿಯ ಸೌತ್ ಅವಿನ್ಯೂ ಮಾರ್ಗದಲ್ಲಿದ್ದ ನಂ.82ನೇ ಪ್ಲಾಟ್‍ನಲ್ಲಿ ಆಸ್ಕರ್ ಫರ್ನಾಂಡಿಸ್ ಅವರು 83ನೇ ಪ್ಲಾಟ್‍ನಲ್ಲಿ ನಾನು ವಾಸವಾಗಿದ್ದೆವು. ನಾವಿಬ್ಬರು ಎರಡು ದೇಹ ಒಂದು ಜೀವದಂತಿದ್ದೆವು. ಆಸ್ಕರ್ ಫರ್ನಾಂಡಿಸ್ ಅವರ ಕಾರ್ಯವೈಖರಿಯನ್ನು ಕಂಡು ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಶ್ರೀಯುತ ರಾಜೀವ್ ಗಾಂಧಿ ಅವರು ಆಸ್ಕರ್ ಫರ್ನಾಂಡಿಸ್ ಅವರನ್ನು ಎಐಸಿಸಿ ಜಂಟಿ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದರು.
ವಾತ್ಸಲ್ಯಮಯಿಯಾದ ಆಸ್ಕರ್ ಫರ್ನಾಂಡಿಸ್ ಅವರು ರಾಜೀವ್ ಗಾಂಧಿ ಅವರಿಗೆ ನನ್ನನ್ನು ಆತ್ಮೀಯವಾಗಿ ಪರಿಚಯಿಸಿದರು. ನಂತರ ಶ್ರೀ ರಾಜೀವ್ ಗಾಂಧಿಯವರು ನನ್ನನ್ನು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷನನ್ನಾಗಿ ನೇಮಕಮಾಡಿದರು. ಅಲ್ಲದೇ 1987ರಲ್ಲಿ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ನಡೆದ ಜಿಲ್ಲಾಪಂಚಾಯತ್ ಚುನಾವಣೆಯ ಸಂಪೂರ್ಣ ಜವಾಬ್ದಾರಿಯನ್ನು ನನಗೆ ವಹಿಸಿಕೊಟ್ಟರು. ಕಾಂಗ್ರೆಸ್ ಪಕ್ಷದಲ್ಲಿ ನನಗೆ ಎಲ್ಲಾ ಹುದ್ದೆಗಳನ್ನು ನಿರ್ವಹಿಸುವ ಅವಕಾಶವನ್ನು ಆಸ್ಕರ್ ಅವರು ಒದಗಿಸಿಕೊಟ್ಟರು.
ಆಸ್ಕರ್ ಫರ್ನಾಂಡಿಸ್ ಅವರು ನನಗೆ ಸಹೋದ್ಯೋಗಿ ಮಾತ್ರವಾಗಿರದೇ ನನ್ನ 'ಪೊಲಿಟಿಕಲ್ ಗಾಡ್ ಫಾದರ್' ಕೂಡ ಆಗಿದ್ದರು. ತಮ್ಮ ಜೊತೆ ಜೊತೆಯಲ್ಲಿಯೇ ರಾಜಕೀಯವಾಗಿ ನಾನೂ ಬೆಳೆಯಬೇಕೆಂಬ ಹಂಬಲ ಅವರಲ್ಲಿತ್ತು. ಅವರದು ಮಾತೃಹೃದಯ. ಪಕ್ಷದ ಸಾಮಾನ್ಯ ಕಾರ್ಯಕರ್ತನಿಂದ ಹಿಡಿದು ಎಲ್ಲರ ಜೊತೆ ಪ್ರೀತಿ, ವಿಶ್ವಾಸ, ವಾತ್ಸಲ್ಯವನ್ನು ಗಳಿಸಿದ್ದರು. ನಾನು ಅವರನ್ನು ಪ್ರೀತಿಯಿಂದ ಮದರ್ ಥೆರೆಸ್ಸಾ ಎಂದು ಕರೆಯುತ್ತಿದ್ದೆ.
ಆಸ್ಕರ್ ಫರ್ನಾಂಡಿಸ್ ಅವರನ್ನು ಬೇರೆ ಯಾರೇ ಭೇಟಿ ಮಾಡಿ ಯಾವುದೇ ಸಮಸ್ಯೆಯನ್ನು ಚರ್ಚಿಸಿದರೂ ಅದನ್ನು ಅವರು ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಿದ್ದರು. ಆದರೆ ಅದನ್ನು ಬೇರೆ ಯಾರಿಗೂ ಸಹ ಹೇಳುತ್ತಿರಲಿಲ್ಲ. ಇದರಿಂದ ನಾನು ಅವರನ್ನು ತಮಾಷೆಯಿಂದ Asker not teller ಎಂದು ಹೇಳುತ್ತಿದ್ದೆ. ಜೀವಿತಾವಧಿಯ ಕೊನೆಯವರೆಗೂ ಕಾಂಗ್ರೆಸ್ ಪಕ್ಷ ಮತ್ತು ಅವರ ಸಂಬಂಧ ತಾಯಿ-ಮಗನ ಸಂಬಂಧದಂತಿತ್ತು ಎಂದು ಸ್ಮರಿಸಿಕೊಂಡರು.
ನಾನು ಎಂದೆಂದಿಗೂ ಮರೆಯದ ಅಪರೂಪದ ರಾಜಕಾರಣಿ. ಮಾನವೀಯತೆಯ ವ್ಯಕ್ತಿತ್ವವುಳ್ಳ ರಾಜಕೀಯ ಮುತ್ಸದ್ಧಿಯಾಗಿದ್ದರು. ಶ್ರೀಯುತ ಆಸ್ಕರ್ ಫರ್ನಾಂಡಿಸ್ ಅವರ ನಿಧನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತಾ ಅವರ ಕುಟುಂಬ ವರ್ಗಕ್ಕೆ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿ ಸಿಗಲಿ ಎಂದು ಬಯಸುತ್ತೇನೆ ಎಂದು ಮಾಧ್ಯಮ ಹೇಳಿಕೆ ನೀಡುವ ಮೂಲಕ ತಿಳಿಸಿದ್ದಾರೆ.







