ಕಾಂಗ್ರೆಸ್ ಮುಖಂಡ ಆಸ್ಕರ್‌ಗೆ ಉಡುಪಿ ಬಿಜೆಪಿ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ

ಉಡುಪಿ, ಸೆ.14: ಅಗಲಿದ ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅವರಿಗೆ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಮಂಗಳವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಆಸ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನುಡಿ ನಮನ ಸಲ್ಲಿಸಿದ ಶಾಸಕ ಕೆ.ರಘುಪತಿ ಭಟ್, ವಿರೋಧ ಪಕ್ಷದ ನಾಯಕರು ಅಗಲಿದಾಗ ವಿರೋಧಿ ಪಕ್ಷದ ಕಚೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸುವ ಸಂಪ್ರದಾಯ ಉಡುಪಿ ಜಿಲ್ಲೆಯಲ್ಲಿ ಮಾತ್ರ ಇದೆ. ಇದೇ ರೀತಿ ಡಾ.ವಿ.ಎಸ್.ಆಚಾರ್ಯ ಅಗಲಿದಾಗ ಕಾಂಗ್ರೆಸ್ ಕಚೇರಿ ಯಲ್ಲಿಯೂ ಶ್ರದ್ಧಾಂಜಲಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ರಾಜಕಾರಣ ಎಂಬುದು ಚುನಾವಣೆಯಲ್ಲಿ ಮಾತ್ರ. ಅದರ ನಂತರ ವಿರೋಧಿ ಪಕ್ಷಗಳಾಗಿ ದ್ದರೂ ಪರಸ್ಪರ ಗೌರವ ಕೊಡುವ ಸಂಪ್ರಾದಯವನ್ನು ಬೆಳಿಸಿಕೊಂಡು ಬರುತ್ತಿದ್ದೇವೆ ಎಂದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ಡಾ.ವಿ.ಎಸ್.ಆಚಾರ್ಯ ಹಾಗೂ ಆಸ್ಕರ್ ಸಂಬಂಧ ಬಹಳ ಗಟ್ಟಿಯಾಗಿತ್ತು. ಎಲ್ಲರನ್ನು ಒಳ್ಳೆಯ ದೃಷ್ಠಿಯಲ್ಲಿ ನೋಡುವ ವಿಶಾಲ ಹೃದಯ ಆಸ್ಕರ್ ಅವರಲ್ಲಿತ್ತು. ನಮ್ಮ ಜಿಲ್ಲೆಯವರಾಗಿ ರಾಷ್ಟ್ರ ಮಟ್ಟದಲ್ಲಿ ರಾಜಕೀಯ ಮಾಡಿರುವ ಆಸ್ಕರ್ ಅವರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರವಿ ಅಮೀನ್, ಉಡುಪಿ ನಗರ ಸಭೆಯ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್, ರಾಜ್ಯ ಕಾರ್ಯಕಾರಣಿ ಸದಸ್ಯರಾದ ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಳಾದ ಕುತ್ಯಾರು ನವೀನ್ ಶೆಟ್ಟಿ, ಸದಾನಂದ ಉಪ್ಪಿನಕುದ್ರು ಮೊದಲಾದವರು ಉಪಸ್ಥಿತರಿದ್ದರು.
‘2008ರಲ್ಲಿ ನನ್ನ ಕುಟುಂಬದಲ್ಲಿ ನಡೆದ ಘಟನೆಗೆ ಸಂಬಂಧಿಸಿ ಕೆಲವು ಮಂದಿ ನನ್ನ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿ ನನ್ನನ್ನು ರಾಜಕೀಯವಾಗಿ ಮಟ್ಟ ಹಾಕಲು ಯತ್ನಿಸಿದರು. ಅಂತಹ ಸಂದರ್ಭದಲ್ಲಿ ಆಸ್ಕರ್ ಫೆರ್ನಾಂಡಿಸ್ ನನ್ನನ್ನು ದೆಹಲಿಯಲ್ಲಿ ಭೇಟಿ ಮಾಡಿ ಸಾಂತ್ವಾನ ಹೇಳಿದರಲ್ಲದೆ ಏನಾದರೂ ಸಹಾಯ ಬೇಕ ಎಂದು ಕೂಡ ಕೇಳಿದರು. ಇದು ಅವರ ಬಹಳ ದೊಡ್ಡ ಮಾನವೀಯ ಗುಣವಾಗಿದೆ’
-ರಘುಪತಿ ಭಟ್, ಶಾಸಕರು ಉಡುಪಿ







