ಹಿಂದಿ ದಿವಸ್ ಆಚರಣೆಗೆ ವಿರೋಧ; ರಾಜ್ಯದೆಲ್ಲೆಡೆ ಭುಗಿಲೆದ್ದ ಆಕ್ರೋಶ

ಬೆಂಗಳೂರು, ಸೆ.14: ಕೇಂದ್ರ ಸರಕಾರವು ಹಿಂದಿ ದಿವಸ್ ಆಚರಣೆ ಮೂಲಕ ಹಿಂದಿ ಹೇರಿಕೆಗೆ ಮುಂದಾಗಿರುವ ಕ್ರಮ ಖಂಡಿಸಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯ ವ್ಯಾಪಿ ಕನ್ನಡ ಪರ ಸಂಘಟನೆಗಳು ಕರಾಳ ದಿನವನ್ನು ಆಚರಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸುವ ಮೂಲಕ ಆಕ್ರೋಶ ಹೊರಹಾಕಿದರು.
ಮಂಗಳವಾರ ಬೆಂಗಳೂರು, ಹಾಸನ, ಮಂಡ್ಯ, ಕೋಲಾರ, ದಾವಣಗೆರೆ, ಬೆಳಗಾವಿ, ಬಿಜಾಪುರ ಸೇರಿದಂತೆ ಆಯಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಚಳವಳಿ ವಾಟಾಳ್ ಪಕ್ಷ, ಜಯಕರ್ನಾಟಕ ಸಂಘಟನೆ ಸೇರಿದಂತೆ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು, ಸೆ. 14ರಂದು ಹಿಂದಿ ದಿವಸ್ ಆಚರಣೆ ಮೂಲಕ ಕೇಂದ್ರ ಸರಕಾರ ರಾಜ್ಯದ ಮೇಲೆ ಹಿಂದಿ ಹೇರಿಕೆ ಮಾಡುತ್ತಿರುವುದನ್ನು ಹಿಂಪಡೆಯಬೇಕು ಎಂದು ಪಟ್ಟುಹಿಡಿದರು.
ಸೆ.14 ರಂದು ಹಿಂದಿ ದಿವಸ್ ಆಚರಿಸುವ ಕುರಿತು ಕೇಂದ್ರ ಹೊರಡಿಸಿರುವ ಪ್ರಕಟಣೆಗೆ ರಾಜ್ಯ ಸರಕಾರ ಬೆಂಬಲ ಸೂಚಿಸಿದೆ. ಅಲ್ಲದೆ, ಭಾರತದ ಸಂವಿಧಾನ 350ನೇ ವಿಧಿ ಪ್ರಕಾರ, ಪ್ರತಿ ರಾಜ್ಯ ಸರಕಾರ ಆಡಳಿತ ಭಾಷೆಯಾಗಿ ತನ್ನ ಮಾತೃಭಾಷೆಯನ್ನೆ ಬಳಸಬೇಕು ಹಾಗೂ ಕಡ್ಡಾಯವಾಗಿ ಅಲ್ಲಿನ ಮಕ್ಕಳಿಗೆ ಮತ್ತು ನಾಗರಿಕರಿಗೆ ಶಿಕ್ಷಣದಲ್ಲಿ ಸಾರ್ವತ್ರಿಕವಾಗಿ ತನ್ನ ಮಾತೃಭಾಷೆಗೆ ಒತ್ತು ನೀಡಿ ಪ್ರೋತ್ಸಾಹಿಸಬೇಕು ಎಂದು ಹೋರಾಟಗಾರರು ಹೇಳಿದರು.
ಅದು ಅಲ್ಲದೆ, ಸಂವಿಧಾನದಲ್ಲಿ ಎಲ್ಲಿಯೂ ಹಿಂದಿಯನ್ನು ರಾಷ್ಟ್ರೀಯ ಭಾಷೆ ಎಂದು ಉಲ್ಲೇಖಿಸಿಲ್ಲ. ಆದರೂ ಕೇಂದ್ರ ಸರಕಾರ ಎಲ್ಲಾ ರಾಜ್ಯಗಳ ಮೇಲೂ ಹಿಂದಿ ಹೇರುತ್ತಿರುವುದು ಭಾರತದ ಒಕ್ಕೂಟ ವ್ಯವಸ್ಥೆಗೆ ಮಾಡಿದ ದ್ರೋಹ ಹಾಗೂ ರಾಜ್ಯಗಳ ಸಾರ್ವಭೌಮತ್ವವನ್ನು ಪ್ರಶ್ನಿಸುವಂತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಬ್ಯಾಂಕ್ ಮುಂದೆ ಧರಣಿ: ಹಿಂದಿ ದಿವಸ್ ವಿರೋಧಿಸಿ ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ಹಲವು ಬ್ಯಾಂಕ್‍ಗಳ ಮುಂದೆ ಜಮಾಯಿಸಿ ಮಂಗಳವಾರ ಧರಣಿ ನಡೆಸಿದರು. ಪ್ರಮುಖವಾಗಿ ಸ್ಥಳೀಯ ಬ್ಯಾಂಕುಗಳಲ್ಲಿ ಕನ್ನಡ ಭಾಷೆಯಲ್ಲಿಯೇ ಗ್ರಾಹಕರನ್ನು ಸಂವಹನ ಮಾಡುವ ವ್ಯವಸ್ಥೆ ಕಡ್ಡಾಯವಾಗಿ ಜಾರಿಯಾಗಬೇಕು ಎಂದು ಆಗ್ರಹಿಸಿದರು.
ಬಂದೋಬಸ್ತ್: ಹಿಂದಿ ದಿವಸ್ ಆಚರಣೆಗೆ ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿ, ಪ್ರತಿಭಟನೆಗೆ ಕರೆ ನೀಡಿದ್ದ ಹಿನ್ನೆಲೆ ಬ್ಯಾಂಕಿನ ಕಟ್ಟಡಗಳು, ಕೇಂದ್ರ ಸರಕಾರದ ಕಚೇರಿಗಳ ಬಳಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಹೋರಾಟಗಾರರಿಗೆ ಪೊಲೀಸರ ನೋಟಿಸ್: ಹಿಂದಿ ದಿವಸ್ ವಿರೋಧಿಸಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ಸಾಧ್ಯತೆ ಹಿನ್ನೆಲೆಯಲ್ಲಿ ಸೋಮವಾರವೇ ಕನ್ನಡಪರ ಸಂಘಟನೆಗಳ ಹೋರಾಟಗಾರರಿಗೆ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದ ವಿಚಾರ ಬೆಳಕಿಗೆ ಬಂದಿದೆ.
ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಯ ಮುಖಂಡರಿಗೆ ಪೊಲೀಸ್ ನೋಟಿಸ್ ನೀಡಿದ್ದು, ಕೇಂದ್ರ ಸರಕಾರದ ಸಂಸ್ಥೆಗಳ ಬಳಿ ಪ್ರತಿಭಟಿಸಬಾರದು, ಸರಕಾರಿ ಕಚೇರಿ ಅಧಿಕಾರಿ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಬಾರದು. ಕಚೇರಿಯ ನಾಮಫಲಕಗಳಿಗೆ ಮಸಿ ಬಳಿಯಬಾರದು, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ನಷ್ಟವುಂಟು ಮಾಡಬಾರದು. ಇನ್ನಿತರ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದಲ್ಲಿ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಉಲ್ಲೇಖಿಸಿ ನೋಟಿಸ್ ಜಾರಿಗೊಳಿಸಲಾಗಿತ್ತು.
ಭಾಷಾ ದಬ್ಬಾಳಿಕೆ ಖಂಡನೆ
ಕೇಂದ್ರ ಸರಕಾರ ಹಾಗೂ ಹಿಂದಿಯವರು ಕನ್ನಡಿಗರ ಮೇಲೆ ಮಾಡುತ್ತಿರುವ ಭಾಷೆಯ ದಬ್ಬಾಳಿಕೆಯನ್ನು ನಾವು ಖಂಡಿಸುತ್ತೇವೆ. ಹಿಂದಿ ಹುಟ್ಟುವ ಮೊದಲೇ ಕನ್ನಡ ಭಾಷೆ ಉದಯವಾಗಿತ್ತು. ಇಂತಹ ಭಾಷೆ ನಶಿಸುವ ಕೆಲಸವನ್ನು ಹಿಂದಿಯವರು ಮಾಡುತ್ತಿದ್ದಾರೆ.
-ಸಾ.ರಾ.ಗೋವಿಂದು, ಅಧ್ಯಕ್ಷ, ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘ
ಕನ್ನಡವೇ ಸಾರ್ವಭೌಮ
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಕನ್ನಡಿಗನೇ ದೊರೆ. ಬಲವಂತದ ಹಿಂದಿ ಭಾμÉಗೆ ಆಸ್ಪದ ನೀಡುವುದಿಲ್ಲ. ಅಲ್ಲದೆ, ಬ್ಯಾಂಕ್, ರೈಲ್ವೆ, ಅಂಚೆ ಕಚೇರಿ ಎಲ್ಲ ಕೇಂದ್ರ ಕಚೇರಿಗಳಲ್ಲಿ ಕನ್ನಡ ಕಡ್ಡಾಯವಾಗಿರಬೇಕು, ಕನ್ನಡಿಗರಿಗೆ ಉದ್ಯೋಗ ಸಿಗಬೇಕು, ಹಿಂದಿ ಹೇರಿಕೆ ಮೂಲಕ ಕನ್ನಡಿಗರಿಗೆ ವಂಚನೆ ಮಾಡಲಾಗುತ್ತಿದೆ. ಹಿಂದಿ ದಿವಸ್ ಆಚರಣೆ ಮೂಲಕ ಕನ್ನಡಕ್ಕೆ ಅತ್ಯಂತ ಅಪಾಯ ಬಂದೊದಗಿದೆ.
-ವಾಟಾಳ್ ನಾಗರಾಜ್, ಅಧ್ಯಕ್ಷ, ವಾಟಾಳ್ ಪಕ್ಷ
ಮುಂದಿನ ದಿನಗಳಲ್ಲಿ ತಕ್ಕ ಪಾಠ
ಕನ್ನಡಿಗರ ಮೇಲೆ ಹಿಂದಿ ಭಾಷೆಯನ್ನು ಬಲವಂತವಾಗಿ ಹೇರುತ್ತಿರುವ ಕೇಂದ್ರ ಸರಕಾರದ ಕ್ರಮ ಸರಿಯಲ್ಲ. ಮುಂದಿನ ದಿನಗಳಲ್ಲಿ ಇವರಿಗೆ ತಕ್ಕ ಪಾಠ ಕಲಿಸುತ್ತೇವೆ.
-ಶಿವರಾಮೇಗೌಡ, ಅಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ
ಹಿಂದಿ ಮೇಲಿನ ವ್ಯಾಮೋಹ ಖಂಡನೀಯ
ಕೇಂದ್ರ ಸರಕಾರದ ಮಲತಾಯಿ ಧೋರಣೆ ಹಾಗೂ ಹಿಂದಿ ಮೇಲಿನ ವ್ಯಾಮೋಹದಿಂದಾಗಿ ಎಲ್ಲ ರಾಜ್ಯಗಳ ಮೇಲೆ ಹಿಂದಿ ಹೇರುತ್ತಿರುವುದು ಭಾರತದ ಒಕ್ಕೂಟ ವ್ಯವಸ್ಥೆಗೆ ಮಾಡುತ್ತಿರುವ ಮೋಸ ಮತ್ತು ರಾಜ್ಯಗಳ ಸಾರ್ವಭೌಮತ್ವವನ್ನು ಪ್ರಶ್ನಿಸುವಂತಾಗಿದೆ.
-ದೀಪಕ್, ಅಧ್ಯಕ್ಷ, ಕರುನಾಡ ವಿಜಯಸೇನೆ ಸಂಘಟನೆ
ಬ್ಯಾಂಕ್‍ಗಳ ಮುಂದೆ ಪ್ರತಿಭಟನೆ
ಬ್ಯಾಂಕ್‍ಗಳಲ್ಲಿ ಕನ್ನಡ ದೂರವಾದಷ್ಟು ಬ್ಯಾಂಕ್‍ಗಳ ಸೌಲಭ್ಯಗಳಿಂದ ಕನ್ನಡಿಗರು ವಂಚಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್‍ಗಳ ಮುಂದೆ ಪ್ರತಿಭಟನೆ ನಡೆಸುವ ಮೂಲಕ ಕೇಂದ್ರ ಸರಕಾರಕ್ಕೆ ಬಿಸಿ ಮುಟ್ಟಿಸುತ್ತಿವೆ.
ಇನ್ನು, ರೈಲ್ವೆ, ಅಂಚೆ ಇಲಾಖೆ ಸೇರಿದಂತೆ ಕೇಂದ್ರದ ಇಲಾಖೆಗಳಲ್ಲಿ ಉತ್ತರ ಭಾರತದವರನ್ನು ಭರ್ತಿ ಮಾಡಿ ಕನ್ನಡಿಗರನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ. ಉದ್ಯೋಗಗಳಲ್ಲಿ ನಡೆಯುವ ಪರೀಕ್ಷೆಯಲ್ಲಿ ಕನ್ನಡವನ್ನು ಕಡೆಗಣಿಸಿದ್ದು, ಮೆಟ್ರೋದಲ್ಲಿ ಬಲವಂತವಾಗಿ ಹಿಂದಿ ಹೇರಿಕೆ ಮಾಡಿದಾಗ ಅದನ್ನು ತಡೆದಿದ್ದೇವೆ.
-ಟಿ.ಎ.ನಾರಾಯಣಗೌಡ, ಅಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ
ಹಿಂದಿ ಹೇರಿಕೆ ಸಹಿಸುವುದಿಲ್ಲ
ಕನ್ನಡಿಗರ ಮೇಲೆ ಹಿಂದಿ ಹೇರಿಕೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಕನ್ನಡಿಗರ ಭಾವನೆಗಳಿಗೆ ಧಕ್ಕೆ ಮಾಡುವ ಕೆಲಸವನ್ನು ಕೇಂದ್ರ ಸರಕಾರ ಮಾಡುತ್ತಿದೆ.
-ಪ್ರವೀಣ್ ಶೆಟ್ಟಿ, ರಾಜ್ಯಾಧ್ಯಕ್ಷ ಕರ್ನಾಟಕ ರಕ್ಷಣಾ ವೇದಿಕೆ
ಹಿಂದಿ ಹೇರಿಕೆ ವಿರುದ್ಧ ಜೆಡಿಎಸ್ ಆಕ್ರೋಶ
ಕೇಂದ್ರ ಸರಕಾರದ ವತಿಯಿಂದ ಹಿಂದಿ ದಿವಸ್ ಆಚರಣೆ ವಿರೋಧಿಸಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮಂಗಳವಾ ಶೇಷಾದ್ರಿ ರಸ್ತೆಯ ಜೆಡಿಎಸ್ ಪ್ರಧಾನ ಕಚೇರಿ ಬಳಿ ಜಮಾಯಿಸಿದ ಜೆಡಿಎಸ್ ಕಾರ್ಯಕರ್ತರು, ಕೇಂದ್ರ ಸರಕಾರ ಹಿಂದಿ ಹೇರಿಕೆ ಕ್ರಮವನ್ನು ಬಿಡಬೇಕು ಎಂದು ಒತ್ತಾಯ ಮಾಡಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಟಿ.ಎ.ಶರವಣ, ಕನ್ನಡಕ್ಕೋಸ್ಕರ ಇರುವ ಪಕ್ಷವೆಂದರೆ ಅದು ಜೆಡಿಎಸ್. ಉಳಿದ ಬಿಜೆಪಿ ಮತ್ತು ಕಾಂಗ್ರೆಸ್ ಹಿಂದಿಗೋಸ್ಕರ ಕೆಲಸ ಮಾಡುವ ಪಕ್ಷಗಳಾಗಿವೆ. ಅಲ್ಲದೆ, ಕೇಂದ್ರವೂ ಈ ಕೂಡಲೇ ಹಿಂದಿ ಹೇರಿಕೆ ವಾಪಸ್ ಪಡೆಯ ಬೇಕು.ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ಬೆಂಗಳೂರು ಅಧ್ಯಕ್ಷ ಆರ್.ಪ್ರಕಾಶ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.
ಫಲಕಗಳಿಗೆ ಮಸಿ ಬಳಿದು ಆಕ್ರೋಶ
ಇಲ್ಲಿನ ಬೆಳಗಾವಿ, ಧಾರವಾಡ ಸೇರಿದಂತೆ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿದ ಕನ್ನಡ ಪರ ಹೋರಾಟಗಾರರು, ಕೇಂದ್ರ ಸರಕಾರದ ಜಾಹೀರಾತು ಮತ್ತು ಸಂಸದರ ಚಿತ್ರಗಳಿದ್ದ ಫಲಕಗಳಿಗೆ ಮಸಿ ಬಳಿದು ಆಕ್ರೋಶ ಹೊರಹಾಕಿದರು.








