ಅವೈಜ್ಞಾನಿಕ ಲಾಕ್‌ಡೌನ್‌ನಿಂದ ಜವುಳಿ ಉದ್ಯಮಕ್ಕೆ ಅಪಾರ ನಷ್ಟ: ಯೋಗೀಶ್ ಭಟ್
ಉಡುಪಿ, ಸೆ. 14: ತಳ ಸ್ಪರ್ಶಿ ಮಾಹಿತಿ ಇಲ್ಲದ ಪರಿಣಿತರು ನೀಡಿರುವ ಸಲಹೆಯಂತೆ ರಾಜ್ಯ ಸರಕಾರ ಅವೈಜ್ಞಾನಿಕ ಲಾಕ್‌ಡೌನ್ ಹೇರಿದ್ದು, ಇದರಿಂದ ಜವಳಿ ಅಂಗಡಿಗಳನ್ನು ಬಂದ್ ಮಾಡಿ, ಕೋಟ್ಯಂತರ ರೂ. ನಷ್ಟ ಉಂಟು ಮಾಡಲಾಗಿದೆ. ಇದರಿಂದ ಜವುಳಿ ವರ್ತಕರು ಸಾಲದ ಹೊರೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಅವಿಭಜಿತ ದ.ಕ. ಜಿಲ್ಲೆಯ ಜವುಳಿ ವರ್ತಕರ ಸಂಘದ ಅಧ್ಯಕ್ಷ ಹೆಬ್ರಿ ಯೋಗೀಶ್ ಭಟ್ ಆರೋಪಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ಅವೈಜ್ಞಾನಿಕ ಲಾಕ್‌ಡೌನ್ ಹಾಗೂ ವಾರಾಂತ್ಯ ಕರ್ಫ್ಯೂನಿಂದ ಜವಳಿ ಉದ್ಯಮ ನಷ್ಟ ಕಂಡಿದೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ 5,000 ಜವುಳಿ ಮಳಿಗೆಗಳಿದ್ದು, ನೂರಾರು ಕುಟುಂಬಗಳು ಈ ಉದ್ಯಮವನ್ನೇ ನಂಬಿಕೊಂಡಿದೆ. ಸರಕಾರ ಜವುಳಿ ಅಂಗಡಿಗಳನ್ನು ಬಂದ್ ಮಾಡುವ ಮೂಲಕ ಎಷ್ಟು ಪ್ರಮಾಣ ದಲ್ಲಿ ಕೊರೊನಾ ಸೋಂಕು ನಿಯಂತ್ರಣಗೊಂಡಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಲಿ ಎಂದರು.
ಸರಕಾರ ಜವುಳಿ ಉದ್ಯಮವನ್ನು ಅಗತ್ಯವಸ್ತುಗಳ ಪಟ್ಟಿಗೆ ಸೇರಿಸಬೇಕು. ಜವುಳಿ ಅಂಗಡಿ ಕೆಲಸಗಾರರನ್ನು ಅಸಂಘಟಿತ ಕಾರ್ಮಿಕರ ವಲಯಕ್ಕೆ ಸೇರಿಸಬೇಕು. ಆನ್‌ಲೈನ್ ವ್ಯವಹಾರ ಕರಿನೆರಳಿಗೆ ಜವುಳಿ ವ್ಯವಹಾರ ವಿಸ್ತರಿಸುತ್ತಿದ್ದು, ಇದನ್ನು ತಡೆಯಬೇಕು. ವರ್ತಕರಿಗೆ ವಿಶೇಷ ಆರ್ಥಿಕ ಪ್ಯಾಕೇಜ್‌ನ್ನು ಘೋಷಿಸಬೇಕು. ಜತೆಗೆ ಜವುಳಿ ಉದ್ಯಮಕ್ಕೆ ಸಂಬಂಧಪಟ್ಟ ಯಾವುದೇ ಸರಕಾರದ ನಿರ್ಧಾರಕ್ಕೆ ಮುನ್ನ ಉದ್ಯಮ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಹರಿಪ್ರಸಾದ್ ಪ್ರಭು, ಕಾರ್ಯದರ್ಶಿ ಯಶವಂತ್ ರಾವಲ್, ಕೋಶಾಧಿಕಾರಿ ಗುಲಾಬ್ ಚಂದ್ರ ಜಯಂತಿ ಲಾಲ್, ಸದಸ್ಯರಾದ ಪೂರ್ಣಚಂದ್ರ ಜೈನ್, ಗುರುದಾಸ್ ಶೆಣೈ ಉಪಸ್ಥಿತರಿದ್ದರು.







