ರಸ್ತೆ ಅಪಘಾತ ಪ್ರಕರಣ: ಆರೋಪಿ ಲಾರಿ ಚಾಲಕನಿಗೆ ಶಿಕ್ಷೆ
ಉಡುಪಿ, ಸೆ.14: ಆರು ವರ್ಷಗಳ ಹಿಂದೆ ಲಾರಿಯನ್ನು ಅತಿ ವೇಗ ಹಾಗೂ ನಿರ್ಲಕ್ಷದಿಂದ ಚಲಾಯಿಸಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣನಾದ ಚಾಲಕನ ವಿರುದ್ಧ ಆರೋಪ ವಿಚಾರಣೆಯ ವೇಳೆ ಸಾಬೀತಾದ ಹಿನ್ನೆಲೆಯಲ್ಲಿ ಉಡುಪಿ ಒಂದನೇ ಹೆಚ್ಚುವರಿ ಸಿ.ಜೆ. ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರು ಆರೋಪಿಗೆ ಎರಡು ವರ್ಷಗಳ ಕಾರಾಗೃಹ ವಾಸದ ಶಿಕ್ಷೆ ಹಾಗೂ 11000ರೂ. ದಂಡದ ತೀರ್ಪು ನೀಡಿದ್ದಾರೆ.
ಆರೋಪಿಯಾದ ಉತ್ತರ ಕನ್ನಡ ಜಿಲ್ಲೆ ಅಂಕೋಲ ತಾಲೂಕು ಸುಂಕಸಾಳ ಗ್ರಾಮದ ಹರೀಶ್ ನಾಯ್ಕಾ, 2015ರ ಡಿ.23ರಂದು ಅಪರಾಹ್ನ 1:00ಗಂಟೆಗೆ ರಾಷ್ಟ್ರೀಯ ಹೆದ್ದಾರಿ66ರಲ್ಲಿ ಲಾರಿಯನ್ನು ಅತೀ ವೇಗವಾಗಿ ಚಲಾಯಿಸಿಕೊಂಡು ಬಂದು ಉಡುಪಿ ಅಂಬಲಪಾಡಿ ಗ್ರಾಮದ ರಿಲಾಯನ್ಸ್ ಪೆಟ್ರೋಲ್ ಪಂಪ್ ಬಳಿ ರಸ್ತೆ ಕಾಮಗಾರಿ ಕೆಲಸ ಮಾಡುತಿದ್ದ ಜಾಣ್ಯ ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಆರೋಪಿಯಾದ ಉತ್ತರ ಕನ್ನಡ ಜಿಲ್ಲೆ ಅಂಕೋಲ ತಾಲೂಕು ಸುಂಕಸಾಳ ಗ್ರಾಮದ ಹರೀಶ್ ನಾಯ್ಕಾ, 2015ರ ಡಿ.23ರಂದು ಅಪರಾಹ್ನ 1:00ಗಂಟೆಗೆ ರಾಷ್ಟ್ರೀಯ ಹೆದ್ದಾರಿ66ರಲ್ಲಿ ಲಾರಿಯನ್ನು ಅತೀ ವೇಗವಾಗಿ ಚಲಾಯಿಸಿಕೊಂಡು ಬಂದು ಉಡುಪಿ ಅಂಬಲಪಾಡಿ ಗ್ರಾಮದ ರಿಲಾಯನ್ಸ್ ಪೆಟ್ರೋಲ್ ಪಂಪ್ ಬಳಿ ರಸ್ತೆ ಕಾಮಗಾರಿ ಕೆಲಸ ಮಾಡುತಿದ್ದ ಜಾಣ್ಯ ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಬಗ್ಗೆ ಉಡುಪಿ ಸಂಚಾರ ಠಾಣೆಯ ವೃತ್ತನಿರೀಕ್ಷಕರಾದ ಶ್ರೀಕಾಂತ್ ತನಿಖೆ ನಡೆಸಿ ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಶ್ಯಾಮ್ ಪ್ರಕಾಶ್ ಅವರು ಆ.31ರಂದು ತೀರ್ಪು ನೀಡಿ ಆರೋಪಿ ಹರೀಶ್ ನಾಯ್ಕಾ ವಿರುದ್ಧದ ಆರೋಪ ರುಜುವಾತಾದ ಹಿನ್ನೆಲೆಯಲ್ಲಿ ಆತನಿಗೆ ಎರಡು ವರ್ಷಗಳ ಕಾರಾಗೃಹ ವಾಸದ ಶಿಕ್ಷೆ ಹಾಗೂ 11,000ರೂ.ಗಳ ದಂಡ ರೂಪದ ಶಿಕ್ಷೆಯನ್ನು ವಿಧಿಸಿ ಆದೇಶಿಸಿದ್ದಾರೆ.
ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕರಾದ ಮೋಹಿನಿ ಕೆ. ಅವರು ವಾದಿಸಿದ್ದರು.







