'ಮೋದಿಯ 15 ಲಕ್ಷ ರೂ.ಯ ಮೊದಲ ಕಂತುʼ ಎಂದುಕೊಂಡು ತಪ್ಪಾಗಿ ಜಮೆಯಾದ ಹಣವನ್ನು ಖರ್ಚು ಮಾಡಿದ ವ್ಯಕ್ತಿ !

ಪಾಟ್ನಾ: ಬಿಹಾರದ ಖಗರಿಯಾ ಜಿಲ್ಲೆಯ ವ್ಯಕ್ತಿಯೊಬ್ಬನ ಖಾತೆಗೆ ಬ್ಯಾಂಕ್ ವೊಂದು ಪ್ರಮಾದವಶಾತ್ 5.5 ಲಕ್ಷ ರೂಪಾಯಿಗಳನ್ನು ಜಮೆ ಮಾಡಿದೆ. ಆದರೆ ಆ ವ್ಯಕ್ತಿ ಹಣವನ್ನು ಹಿಂದಿರುಗಿಸಲು ನಿರಾಕರಿಸಿದ್ದು ಖಾತೆಗೆ ಬಂದಿರುವ ಹಣ "ಪ್ರಧಾನಿ ನರೇಂದ್ರ ಮೋದಿ ಕಳುಹಿಸಿದ್ದು" ಎಂದು ಹೇಳಿಕೊಂಡಿದ್ದಾನೆ ಎಂದು IANS ವರದಿ ಮಾಡಿದೆ.
ಖಗರಿಯಾದ ಗ್ರಾಮೀಣ ಬ್ಯಾಂಕ್ ಮನ್ಸಿ ಪೊಲೀಸ್ ಠಾಣೆ ವ್ಯಾಪ್ತಿಯ ಬಕ್ತಿಯಾರ್ಪುರ್ ಗ್ರಾಮದ ರಂಜಿತ್ ದಾಸ್ ಗೆ ತಪ್ಪಾಗಿ ಹಣವನ್ನು ಕಳುಹಿಸಿದೆ. ಹಲವು ಸೂಚನೆಗಳ ಹೊರತಾಗಿಯೂ ದಾಸ್ ತಾನು ಅದನ್ನು ಖರ್ಚು ಮಾಡಿದ್ದೇನೆ ಎಂದು ಹೇಳುತ್ತಾ ಹಣ ವಾಪಸ್ ನೀಡಲು ನಿರಾಕರಿಸಿದ್ದಾನೆ.
"ಈ ವರ್ಷದ ಮಾರ್ಚ್‌ನಲ್ಲಿ ನಾನು ಹಣವನ್ನು ಸ್ವೀಕರಿಸಿದಾಗ ನನಗೆ ತುಂಬಾ ಸಂತೋಷವಾಯಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಭರವಸೆ ನೀಡಿದ್ದಾರೆ. ಇದು ಮೊದಲ ಕಂತಿನ ಹಣವೆಂದು ನಾನು ಭಾವಿಸಿದ್ದೆ. ನನ್ನ ಎಲ್ಲಾ ಹಣವನ್ನು ಖರ್ಚು ಮಾಡಿದ್ದೇನೆ. ಈಗ, ನನ್ನ ಬ್ಯಾಂಕ್ ಖಾತೆಯಲ್ಲಿ ಸ್ವಲ್ಪವೂ ಹಣವಿಲ್ಲ "ಎಂದು ಬಂಧನಕ್ಕೊಳಗಾಗಿರುವ ದಾಸ್ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ಬ್ಯಾಂಕಿನ ಮ್ಯಾನೇಜರ್ ನೀಡಿದ ದೂರಿನ ಮೇರೆಗೆ ನಾವು ರಂಜಿತ್ ದಾಸ್ ಅವರನ್ನು ಬಂಧಿಸಿದ್ದೇವೆ. ಮುಂದಿನ ತನಿಖೆ ನಡೆಯುತ್ತಿದೆ’’ ಎಂದು ಮಾನ್ಸಿ ಸ್ಟೇಷನ್ ಹೌಸ್ ಆಫೀಸರ್ ದೀಪಕ್ ಕುಮಾರ್ ಹೇಳಿದರು.