ಬೋಳ ವ್ಯವಸಾಯ ಸಹಕಾರಿ ಸಂಘದಿಂದ ಹಿಂಸೆ: ಪ್ರಮೀಳಾ ಶೆಟ್ಟಿ ಆರೋಪ
ಉಡುಪಿ, ಸೆ.15: ‘ಬೋಳ ವ್ಯವಸಾಯ ಸಹಕಾರಿ ಸಂಘದಲ್ಲಿ ಕಾರ್ಯದರ್ಶಿ ಯಾಗಿ ನಿರ್ವಹಿಸುತ್ತಿದ್ದ ನನ್ನ ಮೃತ ಪತಿ ಸೊಸೈಟಿಯಲ್ಲಿ ಅವ್ಯವಹಾರ ನಡೆಸಿ ದ್ದಾರೆಂದು ಆರೋಪಿಸಿ ಸೊಸೈಟಿಯವರು ನಮ್ಮಿಂದ 75ಲಕ್ಷ ರೂ. ಕಟ್ಟಿಸಿಕೊಂಡು ಹಿಂಸೆ ನೀಡುತ್ತಿದ್ದಾರೆ. ನಕಲಿ ದಾಖಲೆ ಸೃಷ್ಠಿಸಿ, ಫೋರ್ಜರಿ ಸಹಿ ಮಾಡಿ ಪತಿ ಯಿಂದ ನಮಗೆ ಸಿಗಬೇಕಾದ ಸರಕಾರಿ ಸೌಲಭ್ಯದಿಂದ ವಂಚಿತರನ್ನಾಗಿಸಿದ್ದಾರೆ ಎಂದು ಕಾರ್ಕಳ ತಾಲೂಕಿನ ಸಾಂತೂರು ನಿವಾಸಿ ಪ್ರಮೀಳಾ ಶೆಟ್ಟಿ ಆರೋಪಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಪತಿ ಸುಮಾರು 30ವರ್ಷಗಳ ಕಾಲ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿ 2011ರ ಸೆ.10ರಂದು ಅನಾರೋಗ್ಯದಿಂದ ನಿಧನರಾದರು. ಉತ್ತಮ ನಡತೆ ಹೊಂದಿದ್ದ ನನ್ನ ಪತಿ ಸೊಸೈಟಿಗೆ ಮೋಸ ಮಾಡಿದ್ದಾ ರೆಂದು ಆಡಳಿತ ಮಂಡಳಿ 2012ರ ಜ.6ರಂದು ಏಕಾಏಕಿ ಆರೋಪ ಹೊರಿಸಿತು. ಹಣ ಪಾವತಿಸದಿದ್ದರೆ ಆಸ್ತಿ ಮುಟ್ಟುಗೋಲು ಹಾಕುವ ಬೆದರಿಕೆ ಹಾಕಲಾಯಿತು. ಪತಿಯ ಹೆಸರಿನ ಆಸ್ತಿಯನ್ನು ಒತ್ತಾಯ ಪೂರ್ವಕವಾಗಿ ಮಾರಾಟ ಮಾಡಿಸಿ 75ಲಕ್ಷ ರೂ. ಸೊಸೈಟಿಗೆ ಪಾವತಿಸುವಂತೆ ಅವರು ಮಾಡಿದ್ದಾರೆ ಎಂದರು.
ಮರಣ ನಂತರ ಪತಿಗೆ ಸಲ್ಲಬೇಕಾಗಿದ್ದ ಸರಕಾರಿ ಸೇರಿದಂತೆ ಇನ್ನಿತರ ಸೌಲಭ್ಯ ಗಳನ್ನು ತಡೆ ಹಿಡಿದಿರುವ ಸೊಸೈಟಿಯವರು, ಅನುಮತಿ ಇಲ್ಲದೆ ಸೊಸೈಟಿಯ ಭದ್ರತಾ ಲಾಕರ್‌ನಲ್ಲಿಟ್ಟಿದ್ದ ಸುಮಾರು 200ಗ್ರಾಪಂ ಚಿನ್ನಾಭರಣಗಳನ್ನು ಮತ್ತು ಕುಟುಂಬ ಸದಸ್ಯರ ಆಸ್ತಿಗಳನ್ನು ಮುಟ್ಟು ಗೋಲು ಹಾಕಿಕೊಂಡಿದ್ದಾರೆ. ಪತಿಯ ಹೆಸರಿನಲ್ಲಿದ್ದ ಪ್ರಾವಿಡೆಂಟ್ ಫಂಡ್ ಬಡ್ಡಿ ಸಮೇತ ನೀಡದೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಅವರು ದೂರಿದರು.
ಕರ್ನಾಟಕ ಕಾರ್ಮಿಕ ಪರಿಷತ್ ಅಧ್ಯಕ್ಷ ರವಿ ಶೆಟ್ಟಿ ಬೈಂದೂರು ಮಾತನಾಡಿ, ಈ ಪ್ರಕರಣದ ಬಗ್ಗೆ ಕೂಲಂಕಷ ಪರಿಶೀಲಿಸಿ ಕಾನೂನಿನಂತೆ ಸೊಸೈಟಿಯವರ ವಿರುದ್ಧ ಪ್ರಕರಣ ದಾಖಲಿಸಲು ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡ ಬೇಕು. ದೂರುರಾದ ಕುಟುಂಬಗಳಿಗೆ ಸೂಕ್ತ ಭದ್ರತೆ ನೀಡಬೇಕು. ಪ್ರಮೀಳಾ ಕುಟುಂಬಕ್ಕೆ ನೀಡಿರುವ ಮಾನಸಿಕ ಹಿಂಸೆ, ಮಾನನಷ್ಟ ಹಾಗೂ ಇತರ ಖರ್ಚು ಗಳನ್ನು ಸೊಸೈಟಿಯವರಿಂದ ತೆಗೆಸಿಕೊಡಬೇಕು. ಅನಧಿಕೃತವಾಗಿ ಕಟ್ಟಿಸಿಕೊಂಡ 75ಲಕ್ಷ ರೂ. ಹಣವನ್ನು ದೂರು ಇತ್ಯರ್ಥ ಆಗುವವರಿಗೆ ಕೋರ್ಟಿನ ಸುಪರ್ದಿಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪರಿಷತ್ ಜಿಲ್ಲಾಧ್ಯಕ್ಷ ಮೋಹನ್ ಕಲ್ಮಾಡಿ, ಮಹಿಳಾ ಘಟಕದ ಅಧ್ಯಕ್ಷೆ ಮಮತಾ, ಸಾಮಾಜಿಕ ಕಾರ್ಯಕರ್ತ ಜಯಕರ ಹಿರಿಯಡ್ಕ ಹಾಜರಿದ್ದರು.







