ಮಮತಾ ಬ್ಯಾನರ್ಜಿ ವಿರುದ್ಧ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ಟಿಬ್ರೇವಾಲ್ ಗೆ ಚು. ಆಯೋಗ ನೋಟಿಸ್

ಕೋಲ್ಕತಾ: ಭವಾನಿಪುರ ಉಪಚುನಾವಣೆಗೆ ನಾಮಪತ್ರ ಸಲ್ಲಿಸಿದ ಎರಡು ದಿನಗಳ ನಂತರ ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ಟಿಬ್ರೆವಾಲ್ ಅವರು ಸಂಬಂಧಿತ ಚುನಾವಣಾಧಿಕಾರಿ ಗಳಿಂದ ನೋಟಿಸ್ ಪಡೆದರು. ಪ್ರಿಯಾಂಕಾ ಟಿಬ್ರೆವಾಲ್ (40) ಅವರು ಸೆಪ್ಟೆಂಬರ್ 30 ರ ಉಪಚುನಾವಣೆಯಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಸ್ಪರ್ಧಿಸಿದ್ದಾರೆ.
ಬುಧವಾರ ಚುನಾವಣಾಧಿಕಾರಿ ನೀಡಿದ ನೋಟಿಸ್‌ನಲ್ಲಿ ಪ್ರಿಯಾಂಕಾ ಟಿಬ್ರೆವಾಲ್ ಅವರು ನಾಮಪತ್ರ ಸಲ್ಲಿಸುವ ದಿನದಂದು ಮಾದರಿ ನೀತಿ ಸಂಹಿತೆ (ಎಂಸಿಸಿ) ಹಾಗೂ ಕೋವಿಡ್ -19 ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಿದ್ದಾರೆ.
"ನೀವು ಮೆರವಣಿಗೆಯಲ್ಲಿ ಅನುಮತಿಸಲಾದ ವಾಹನಗಳ ಸಂಖ್ಯೆ ಮತ್ತು ನಾಮಪತ್ರ ಸಲ್ಲಿಸುವ ಮೊದಲು ಮತ್ತು ನಂತರ ಯಾವುದೇ ಮೆರವಣಿಗೆಗೆ ಸಂಬಂಧಿಸಿದ ನಿಬಂಧನೆಗಳಿಗೆ ಇಸಿಐ (ಭಾರತದ ಚುನಾವಣಾ ಆಯೋಗ) ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವಂತೆ ತೋರುತ್ತಿದೆ" ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.
ಬುಧವಾರ ಸಂಜೆ 5 ಗಂಟೆಯೊಳಗೆ ನೋಟಿಸ್‌ಗೆ ಉತ್ತರಿಸುವಂತೆ ಮತ್ತು ಉಪಚುನಾವಣೆಗೆ ಮುನ್ನ ಆಕೆಯ ರ್ಯಾಲಿಗಳಿಗೆ ಅನುಮತಿಯನ್ನು ಏಕೆ ರದ್ದುಗೊಳಿಸಬಾರದು ಎಂಬುದನ್ನು ವಿವರಿಸುವಂತೆ ಚುನಾವಣಾಧಿಕಾರಿ ಪ್ರಿಯಾಂಕಾ ಟಿಬ್ರೆವಾಲ್ ಅವರಿಗೆ ಸೂಚಿಸಿದ್ದರು.
ಆದರೆ ಬಿಜೆಪಿಯ ಪ್ರಿಯಾಂಕಾ ಟಿಬ್ರೆವಾಲ್ ಅವರು ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ ಮತ್ತು ರಸ್ತೆಯಲ್ಲಿ ವಾಹನಗಳನ್ನು ತೆಗೆಯುವುದು ಕೋಲ್ಕತಾ ಪೊಲೀಸರ ಹಕ್ಕು ಎಂದು ಹೇಳಿದ್ದಾರೆ.