ದಾಭೋಲ್ಕರ್ ಹತ್ಯೆ ಪ್ರಕರಣ: ಐದು ಆರೋಪಿಗಳ ವಿರುದ್ಧ ದೋಷಾರೋಪ ಹೊರಿಸಿದ ಪುಣೆ ವಿಶೇಷ ನ್ಯಾಯಾಲಯ

ಪುಣೆ: ಎಂಟು ವರ್ಷಗಳ ಹಿಂದೆ, 2013ರಲ್ಲಿ ನಡೆದ ವಿಚಾರವಾದಿ ಡಾ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ಪುಣೆಯ ವಿಶೇಷ ನ್ಯಾಯಾಲಯವೊಂದು ಸನಾತನ ಸಂಸ್ಥಾ ಜತೆಗೆ ನಂಟು ಹೊಂದಿರುವ ಐದು ಮಂದಿ ಆರೋಪಿಗಳ ವಿರುದ್ಧ ದೋಷಾರೋಪ ಹೊರಿಸಿದ್ದು ಇದರೊಂದಿಗೆ ಪ್ರಕರಣದ ವಿಚಾರಣೆ ಆರಂಭಗೊಂಡಂತಾಗಿದೆ. ಆದರೆ ಎಲ್ಲಾ ಐವರು ಆರೋಪಿಗಳು ತಮ್ಮ ವಿರುದ್ಧದ ಆರೋಪಗಳನ್ನು ಬುಧವಾರ ಅಲ್ಲಗಳೆದಿದ್ದಾರೆ.
ಆರೋಪಿಗಳಾದ ಡಾ ವಿರೇಂದ್ರಸಿಂಗ್ ತಾವಡೆ, ಸಚಿನ್ ಅಂದೂರೆ, ಶರದ್ ಕಲಸ್ಕರ್ ಮತ್ತು ವಿಕ್ರಮ್ ಭಾವೆ ವಿರುದ್ಧ ಕೊಲೆ, ಕೊಲೆ ಸಂಚು ಹಾಗೂ ಯುಎಪಿಎ ಸೆಕ್ಷನ್ 16 ಮತ್ತು ಶಸ್ತ್ರಾಸ್ತ್ರ ಕಾಯಿದೆಯ ವಿವಿಧ ನಿಬಂಧನೆಗಳ ಪ್ರಕಾರ ದೋಷಾರೋಪ ಹೊರಿಸಲಾಗಿದ್ದರೆ, ಇನ್ನೋರ್ವ ಆರೋಪಿ ವಕೀಲ ಸಂಜಯ್ ಪುನಲೇಕರ್ ವಿರುದ್ಧ ಸಾಕ್ಷ್ಯ ನಾಶದ ಆರೋಪ ಹೊರಿಸಲಾಗಿದೆ.
ಆಗಸ್ಟ್ 20, 2013ರಂದು ಪುಣೆಯ ಓಂಕಾರೇಶ್ವರ ದೇವಸ್ಥಾನ ಸಮೀಪ ಬೆಳಗ್ಗಿನ ವಾಕಿಂಗ್ ಹೊರಟಿದ್ದ ವೇಳೆ ಇಬ್ಬರು ಆಗಂತುಕರು ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನ್ ಸಮಿತಿ ಸ್ಥಾಪಕರೂ ಆಗಿರುವ ದಾಭೋಲ್ಕರ್ ಅವರನ್ನು ಗುಂಡಿಕ್ಕಿ ಸಾಯಿಸಿದ್ದರು. ಪುಣೆ ಪೊಲೀಸರಿಂದ ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಸಿಬಿಐ ಇಲ್ಲಿಯ ತನಕ ಐದು ಮಂದಿ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಜೂನ್ 2016ರಂದು ಸನಾತನ ಸಂಸ್ಥಾ ಸದಸ್ಯ ಹಾಗೂ ಇಎನ್‍ಟಿ ಸರ್ಜನ್ ಆಗಿರುವ ಡಾ ವಿರೇಂದ್ರಸಿಂಹ್ ತಾವಡೆ ಅವರನ್ನು ಬಂಧಿಸಿ ಅದೇ ವರ್ಷದ ಸೆಪ್ಟೆಂಬರಿನಲ್ಲಿ ಚಾರ್ಜ್‍ಶೀಟ್ ಸಲ್ಲಿಸಿತ್ತು. ಈತ ಈ ಸಂಚಿನ ರೂವಾರಿ ಎಂದು ಹೇಳಲಾಗಿತ್ತು. ಆಗಸ್ಟ್ 2018ರಲ್ಲಿ ಇತರ ಇಬ್ಬರು ಸನಾತನ ಸಂಸ್ಥಾ ಸದಸ್ಯರಾದ ಸಚಿನ್ ಹಾಗೂ ಶರದ್ ಬಂಧನ ಆಗಿತ್ತು. ಇಬ್ಬರ ವಿರುದ್ಧವೂ ಪೂರಕ ಚಾರ್ಜ್‍ಶೀಟ್ ಫೆಬ್ರವರಿ 2019ರಲ್ಲಿ ಸಲ್ಲಿಸಲಾಗಿತ್ತು. ದಾಭೋಲ್ಕರ್ ಅವರಿಗೆ ಗುಂಡಿಕ್ಕಿದವರು ಇವರಾಗಿದ್ದರು ಎಂದು ಸಿಬಿಐ ಹೇಳಿದೆ. ಮುಂಬೈ ಮೂಲದ ವಕೀಲ ಸಂಜೀವ್ ಪುನಲೇಕರ್ ಹಾಗೂ ಆತನ ಸಹಾಯಕ ವಿಕ್ರಮ್ ಭಾವೆ ಎಂಬವರನ್ನು ಮೇ 2019ರಲ್ಲಿ ಬಂಧಿಸಲಾಗಿತ್ತು. ಸದ್ಯ ಪುನಲೇಕರ್ ಮತ್ತು ಭಾವೆ ಜಾಮೀನಿನ ಮೇಲೆ ಹೊರಗಿದ್ದರೆ ಇತರ ಮೂವರು ನ್ಯಾಯಾಂಗ ಬಂಧನದಲ್ಲಿದ್ದಾರೆ.