ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗೆ ಕೊರೋನ ದೃಢ

ಚಿಕ್ಕಮಗಳೂರು, ಸೆ.16: ದಲಿತ ಯುವಕನಿಗೆ ಮೂತ್ರ ಕುಡಿಸಿದ ಆರೋಪದಡಿಯಲ್ಲಿ ಸಿಐಡಿ ಪೊಲೀಸರಿಂದ ಬಂಧನಕ್ಕೊಳಗಾಗಿ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದ ಗೋಣಿಬೀಡು ಠಾಣೆಯ ಪಿಎಸ್ಸೈ ಅರ್ಜುನ್ ಅವರಿಗೆ ಕೊರೋನಾ ಪಾಸಿಟಿವ್ ಇರುವುದು ದೃಢಪಟ್ಟಿರುವುದರಿಂದ ಆರೋಪಿಯನ್ನು ಜಿಲ್ಲಾಸ್ಪತ್ರೆಯ ಕೊರೋನಾ ಕೇರ್ ಸೆಂಟರ್ ಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಪ್ರಕರಣದ ಆರೋಪಿ ಅರ್ಜುನ್ ಅವರನ್ನು ಸಿಐಡಿ ಪೊಲೀಸರು ಇತ್ತೀಚೆಗೆ ಬಂಧಿಸಿದ್ದು, ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪಿಸಿತ್ತು. ಈ ವೇಳೆ ಆರೋಪಿ ಅರ್ಜುನ್ ಮಧ್ಯಂತರ ಜಾಮೀನು ಆರ್ಜಿಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಈ ಜಾಮೀನು ಅರ್ಜಿಯ ವಿಚಾರಣೆ ಸೆ.15ರಂದು ಬುಧವಾರ ನಿಗದಿಯಾಗಿತ್ತು.
ಆದರೆ ಚಿಕ್ಕಮಗಳೂರು ಕಾರಾಗೃಹದಲ್ಲಿದ್ದ ಆರೋಪಿ ಅರ್ಜುನ್ ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದ ಹಿನ್ನೆಲೆಯಲ್ಲಿ ಜೈಲಿನ ಅಧಿಕಾರಿಗಳು ಆರೋಪಿಯನ್ನು ಸೆ.9ರಂದು ಕೊರೋನಾ ಪರೀಕ್ಷೆಗೆ ಒಳಪಡಿಸಿದ್ದರು. ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಆರೋಪಿಯನ್ನು ಬುಧವಾರ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಯ ಕೋವಿಡ್ ಕೇರ್ ಸೆಂಟರ್‍ಗೆ ದಾಖಲಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಆರೋಪಿ ಜಾಮೀನು ಅರ್ಜಿಯ ವಿಚಾರಣೆಗೆ ಹಾಜರಾಗಲು ಸಾಧ್ಯವಾಗದ ಕಾರಣಕ್ಕೆ ಜಾಮೀನು ಅರ್ಜಿಯ ವಿಚಾರಣೆಯನ್ನು ಸೆ.20ಕ್ಕೆ ನ್ಯಾಯಾಲಯ ಮುಂದೂಡಿದೆ. ಆರೋಪಿ ಅರ್ಜುನ್ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಸೆ.28ರವರೆಗೆ ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ.







