ಸೆ.16ರಿಂದ ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನ
ಉಡುಪಿ, ಸೆ.15: ಮಣಿಪಾಲ ಮಾಹೆಯ ವಾಣಿಜ್ಯ ವಿಭಾಗದ ವತಿಯಿಂದ ‘ಸಮರ್ಥನೀಯ ಜಾಗತಿಕ ಕ್ರಿಯಾತ್ಮಕ ವ್ಯವಹಾರಗಳ ಮರುವ್ಯಾಖ್ಯಾನ’ ವಿಷಯದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನವನ್ನು ಸೆ.16ರಂದು ಮತ್ತು 17ರಂದು ಆನ್‌ಲೈನ್ ಮೂಲಕ ಆಯೋಜಿಸಲಾಗಿದೆ.
ಸಮ್ಮೇಳನವನ್ನು ಅಮೆರಿಕಾ ಟೆಕ್ಸಾಸ್ ಪಿಡಬ್ಲುಸಿ ಶ್ರೀತಲ್ ಶೆಣೈ ಉದ್ಘಾಟಿಸಲಿದ್ದು, ಸಂಶೋಧನಾ ವಿಭಾಗದ ನಿರ್ದೇಶಕ ಡಾ.ಸತೀಶ್ ರಾವ್ ಅಧ್ಯಕ್ಷತೆ ವಹಿಸಲಿರುವರು. ದೇಶಾದ್ಯಂತ ಮತ್ತು ವಿದೇಶಗಳಿಂದ 70ಕ್ಕೂ ಅಧಿಕ ಪ್ರಬಂಧಗಳು ಮಂಡನೆಯಾಗಲಿವೆ ಎಂದು ಮಾಹೆ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ರವೀಂದ್ರ ಶೆಣೈ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಈ ಸಮ್ಮೇಳನದಲ್ಲಿ ನೆದರ್ ಲ್ಯಾಂಡಿನ ಪ್ರಾಧ್ಯಾಪಕ ಡಾ.ಎಡ್ವಿನ್ ವೀಸಿ, ಮಲೇಶಿಯಾದ ಮಣಿಪಾಲ ಗ್ಲೋಬಲ್ ನೆಕ್ಸ್ಟ್ ವಿವಿಯ ಉಪಕುಲಪತಿ ಡಾ.ಚಿನ್ಮೋಯ್ ಸಾಹು, ಆಸ್ಟ್ರೇಲಿಯಾದ ಡೀಕಿನ್ ವಿವಿಯ ಮಾನ್ಯೇಜ್ ಮೆಂಟ್ ವಿಭಾಗದ ಮುಖ್ಯಸ್ಥ ಡಾ.ಅಲೆಕ್ಸಾಂಡರ್ ನ್ಯುಮ್ಯಾನ್, ದಿಲ್ಲಿ ವಿವಿಯ ಮ್ಯಾನೇಜ್‌ಮೆಂಟ್ ವಿಭಾಗದ ಮಾಜಿ ಡೀನ್ ಡಾ.ಸುನಿತಾ ಸಿಂಗ್ ಸೇನಾ ಗುಪ್ತ ಭಾಗವಹಿಸಲಿರುವರು.
ಸುದ್ದಿಗೋಷ್ಠಿಯಲ್ಲಿ ಸಮ್ಮೇಳನ ಆಯೋಜಕ ಸಮಿತಿ ಮುಖ್ಯಸ್ಥೆ ಡಾ.ರಶ್ಮಿ ಯೋಗೇಶ್ ಪೈ, ಪ್ರಾಧ್ಯಾಪಕ ಅಭಿಷೇಕ್ ರಾವ್ ಉಪಸ್ಥಿತರಿದ್ದರು.







