ಸಮಗ್ರ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರಕ್ಕೆ ಭಾರತ ಚಿಂತನೆ

ಜನರಲ್ ಬಿಪಿನ್ ರಾವತ್ (Photo source: PTI)
ಹೊಸದಿಲ್ಲಿ, ಸೆ.16: ಚೀನಾ ಹೆಚ್ಚು ಆಕ್ರಮಣಕಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತು ಇರಾನ್ ಹಾಗೂ ಟರ್ಕಿ ಬೆಂಬಲದೊಂದಿಗೆ ಅಫ್ಘಾನಿಸ್ತಾನಕ್ಕೆ ಲಗ್ಗೆ ಹಾಕುವ ಸಾಧ್ಯತೆ ಹಿನ್ನೆಲೆಯಲ್ಲಿ, ನೆರೆಯ ಶತ್ರುರಾಷ್ಟ್ರಗಳು, ಸಂಪರ್ಕರಹಿತ ಯುದ್ಧ ತಂತ್ರಜ್ಞಾನ ಮತ್ತು ಆಂತರಿಕ ಭದ್ರತಾ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಭಾರತ ಸಮಗ್ರ ರಾಷ್ಟ್ರೀಯ ಭದ್ರತಾ ವಾಸ್ತುಶಿಲ್ಪವನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಜನರಲ್ ಬಿಪಿನ್ ರಾವತ್ ಪ್ರತಿಪಾದಿಸಿದ್ದಾರೆ.
ಇಂಡಿಯಾ ಇಂಟರ್ನ್ಯಾಶನಲ್ ಸೆಂಟರ್ನಲ್ಲಿ ಮಾಡಿದ ಉಪನ್ಯಾಸದಲ್ಲಿ "ಪಾಶ್ಚಿಮಾತ್ಯ ಚಿಂತನೆಯನ್ನು ವಿರೋಧಿಸುವ ಸಲುವಾಗಿ ಕನ್ಫ್ಯೂಸಿಯನ್ ಅಥವಾ ಸಿನಿಕತನದ ನಾಗರಿಕತೆ ವಾಸ್ತವವಾಗಿ ಇಸ್ಲಾಮಿಕ್ ನಾಗರಿಕತೆಯ ಜತೆ ಕೈಜೋಡಿಸಲಿದೆ" ಎಂಬ 'ನಾಗರಿಕತೆಯ ಸಂಘರ್ಷ' ಕುರಿತ ಸ್ಯಾಮ್ಯುಯೆಲ್ ಹಂಟಿಂಗ್ಟನ್ ಸಿದ್ಧಾಂತವನ್ನು ಉಲ್ಲೇಖಿಸಿದರು.
"ಇದು ಸಂಭವಿಸುತ್ತದೆಯೋ ಇಲ್ಲವೋ ಎನ್ನುವುದನ್ನು ಕಾಲವೇ ಹೇಳಬೇಕು. ಆದರೆ ಸಿನಿಕತನದ ಮತ್ತು ಇಸ್ಲಾಮಿಕ್ ನಾಗರಿಕತೆಗಳು ಒಂದು ರೀತಿಯಲ್ಲಿ ಕೈಜೋಡಿಸುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ. ಚೀನಾ ಇರಾನ್ನತ್ತ ಸ್ನೇಹಹಸ್ತ ಚಾಚಿ, ಟರ್ಕಿ ಜತೆಗೆ ಅಫ್ಘಾನಿಸ್ತಾನಕ್ಕೆ ಹೆಜ್ಜೆ ಇಡುತ್ತಿದೆ" ಎಂದು ಹೇಳಿದರು.
ತಾಲಿಬಾನ್ ನಿಯಂತ್ರಿತ ಅಫ್ಘಾನಿಸ್ತಾನದಲ್ಲಿ ಘಟನಾವಳಿಗಳು ಹೇಗೆ ಅನಾವರಣಗೊಳ್ಳುತ್ತವೆ ಎನ್ನುವುದನ್ನು ಭಾರತ ಕಾದು ನೋಡುತ್ತಿದೆ. ಅಲ್ಲಿ ಹಲವು ಪ್ರಕ್ಷುಬ್ಧತೆಗಳು ಸಂಭವಿಸಬಹುದು. ಅದನ್ನು ಈಗಲೇ ನಿರೀಕ್ಷಿಸಲಾಗದು" ಎಂದು ಸ್ಪಷ್ಟಪಡಿಸಿದರು.