ಧರ್ಮಾತೀತವಾಗಿ ವಯಸ್ಕರಿಗೆ ತಮ್ಮ ವೈವಾಹಿಕ ಸಂಗಾತಿ ಆಯ್ಕೆ ಮಾಡುವ ಹಕ್ಕಿದೆ: ಅಲಹಾಬಾದ್ ಹೈಕೋರ್ಟ್

ಹೊಸದಿಲ್ಲಿ: ಇಬ್ಬರು ವಯಸ್ಕರು ಧರ್ಮಾತೀತವಾಗಿ ತಮ್ಮ ವೈವಾಹಿಕ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕನ್ನು ಹೊಂದಿದ್ದಾರೆ ಎಂದು ಅಲಹಾಬಾದ್ ಹೈಕೋರ್ಟ್ ಅಂತರ್-ಧರ್ಮದ ದಂಪತಿಗಳಿಗೆ ರಕ್ಷಣೆ ನೀಡುವಾಗ ಪುನರುಚ್ಚರಿಸಿದೆ ಎಂದು barandbench.com ವರದಿ ಮಾಡಿದೆ.
ನ್ಯಾಯಮೂರ್ತಿಗಳಾದ ಮನೋಜ್ ಕುಮಾರ್ ಗುಪ್ತಾ ಹಾಗೂ ದೀಪಕ್ ವರ್ಮಾ ಅವರನ್ನೊಳಗೊಂಡ ವಿಭಾಗೀಯ ಪೀಠವು ಅಂತರ್-ಧರ್ಮದ ದಂಪತಿಗಳಿಗೆ ರಕ್ಷಣೆ ನೀಡಿದೆ ಹಾಗೂ ಅವರ ಸಂಬಂಧವನ್ನು ಅವರ ಪೋಷಕರು ಕೂಡ ವಿರೋಧಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಅರ್ಜಿದಾರರು ಯಾವುದೇ ಕಿರುಕುಳಕ್ಕೆ ಒಳಗಾಗದಂತೆ ನೋಡಿಕೊಳ್ಳಲು ನ್ಯಾಯಾಲಯವು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದೆ.
ಅರ್ಜಿಯನ್ನು ಶಿಫಾ ಹಸನ್ ಹಾಗೂ ಆಕೆಯ ಸಂಗಾತಿ ಸಲ್ಲಿಸಿದ್ದು ತಾವಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೇವೆ ಹಾಗೂ ತಮ್ಮ ಸ್ವಂತ ಇಚ್ಛೆಯಂತೆ ಒಟ್ಟಿಗೆ ವಾಸಿಸುತ್ತಿದ್ದೇವೆ ಎಂದು ವಾದಿಸಿದರು.
ಹುಡುಗನ ತಂದೆ ಮದುವೆಗೆ ಒಪ್ಪಿಗೆ ನೀಡಿಲ್ಲ. ಆದರೆ ಆತನ ತಾಯಿ ಸಮ್ಮತಿ ನೀಡಿದ್ದಾರೆ. ಹಸನ್ ಪೋಷಕರಿಬ್ಬರೂ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ದಂಪತಿಗಳು ತಮ್ಮ ಜೀವಕ್ಕೆ ಅಪಾಯವಿದೆ ಎಂದು ಹೇಳಿಕೊಂಡು ಹೈಕೋರ್ಟ್‌ಗೆ ಮೊರೆ ಹೋಗಿದ್ದರು.