ದೇವಸ್ಥಾನ, ಮಸೀದಿ, ಚರ್ಚುಗಳು ನಮ್ಮ ಶ್ರದ್ಧಾ ಕೇಂದ್ರಗಳು, ಅವುಗಳ ರಕ್ಷಣೆ ನಮ್ಮ ಜವಾಬ್ದಾರಿ: ಸಚಿವೆ ಶೋಭಾ ಕರಂದ್ಲಾಜೆ

ಉಡುಪಿ, ಸೆ.17: ದೇವಸ್ಥಾನ, ಮಸೀದಿ, ಚರ್ಚುಗಳು ನಮ್ಮ ಶ್ರದ್ಧಾ ಕೇಂದ್ರಗಳಾಗಿವೆ. ಅವುಗಳ ರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ. ಯಾವುದೇ ಸಮುದಾಯ- ಧರ್ಮಕ್ಕೆ ನೋವುಂಟು ಮಾಡಿದರೆ ನಮಗೆ ಒಳ್ಳೆಯದಾಗಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ರಾಜ್ಯದಲ್ಲಿ ದೇಗುಲ ಧ್ವಂಸ ವಿಚಾರದ ಕುರಿತು ಅವರು ಉಡುಪಿಯಲ್ಲಿಂದು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು. ಅಕ್ರಮ ಸ್ಥಳದಲ್ಲಿ ಶೃದ್ಧಾ ಕೇಂದ್ರಗಳಿದ್ದರೆ ಪೂರ್ವ ಸೂಚನೆ ನೀಡಿ, ಸ್ಥಳೀಯ ಜನರ ಮನವೊಲಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಿ ತೆರವು ಮಾಡುವ ಬಗ್ಗೆ ಸರಕಾರ ಯೋಚಿಸಬೇಕು ಎಂದು ಅವರು ಮನವಿ ಮಾಡಿದರು.
ಶೃದ್ಧಾ ಕೇಂದ್ರಗಳ ಬಗ್ಗೆ ಜನರ ನಂಬಿಕೆ, ಭಕ್ತಿ ಭಾವ ಪ್ರೀತಿ ಜಾಸ್ತಿ ಇರುತ್ತದೆ. ಭಾವನೆಗೆ ನೋವಾದಾಗ ಪ್ರತಿಭಟನೆ ನಡೆಸುತ್ತಾರೆ. ಅಕ್ರಮ ದೇವಾಲಯಗಳು ಕಂಡು ಬಂದರೆ ಊರಿನ ಜನರ ಮನವೊಲಿಸಿ ಕ್ರಮ ತೆಗೆದುಕೊಳ್ಳಬೇಕೆಂದು ರಾಜ್ಯ ಸರಕಾರಕ್ಕೆ ನನ್ನ ಪ್ರಾರ್ಥನೆಯಾಗಿದೆ ಎಂದರು.
ದೇಶದ ಬೇರೆ ಬೇರೆ ಭಾಗದಲ್ಲಿ ಹಿಂದೂ ಧರ್ಮಿಯರ ದೌರ್ಬಲ್ಯತೆಯನ್ನು ದುರುಪಯೋಗಪಡಿಸಿಕೊಂಡು ಮತಾಂತರ ಮಾಡುವ ಕಾರ್ಯಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಕಠಿಣ ಕಾನೂನು ತರಬೇಕಾಗಿದೆ. ಬಲವಂತದ ಮತಾಂತರ ತಡೆಯಲು ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳ ಬೇಕು ಎಂದು ಅವರು ಒತ್ತಾಯಿಸಿದರು.
ಪ್ರಧಾನಿ ಮೋದಿ ಇಂದು 71ನೇ ವರ್ಷಕ್ಕೆ ಕಾಲಿರಿಸುತ್ತಿದ್ದಾರೆ. ದೇಶದ ಬಡಜನರ ಸೇವೆ ಅವರಿಗೆ ಪ್ರಿಯವಾದದ್ದು. ಸೇವಾ ಚಟುವಟಿಕೆ ನಡೆಸಿದರೆ ಅವರಿಗೆ ಮುದಕೊಡುತ್ತದೆ. ಈ ಹಿನ್ನೆಲೆಯಲ್ಲಿ ಬೇರೆ-ಬೇರೆ ರೀತಿಯ ಸೇವಾ ಚಟುವಟಿಕೆಯಲ್ಲಿ ಬಿಜೆಪಿ ತೊಡಗಿಸಿಕೊಂಡಿದೆ. ದೇಶದ ರಕ್ಷಣೆ ಮತ್ತು ಗೌರವ ಹೆಚ್ಚಿಸಲು ದೇವರು ಅವರಿಗೆ ಶಕ್ತಿ ನೀಡಲಿ. ಶ್ರೀಕೃಷ್ಣ- ಚಾಮುಂಡೇಶ್ವರಿ ದೇವರಲ್ಲಿ ನಾನು ಪ್ರಾರ್ಥಿಸುತ್ತೇನೆ ಎಂದು ಅವರು ಹೇಳಿದರು.
ಜಿಎಸ್‌ಟಿಗೆ ಪೆಟ್ರೋಲ್ ಉತ್ಪನ್ನ ತಂದರೆ ಪೆಟ್ರೋಲ್ ದರ ಇಳಿಕೆಯಾಗಬಹುದು ಎಂಬ ನಿರೀಕ್ಷೆ ಇದೆ. ಆ ನಿಟ್ಟಿನಲ್ಲಿ ಪ್ರಧಾನಿ ಮೋದಿ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.









