ವಿಶ್ವವಿಖ್ಯಾತ ಭೌತವಿಜ್ಞಾನಿ ತನು ಪದ್ಮನಾಭನ್ ನಿಧನ
photo: twitter
ಪುಣೆ,ಸೆ.17: ವಿಶ್ವವಿಖ್ಯಾತ ಭೌತವಿಜ್ಞಾನಿ ತನು ಪದ್ಮನಾಭನ್ (64) ಅವರು ಶುಕ್ರವಾರ ಇಲ್ಲಿ ನಿಧನರಾದರು. ಅವರು ಪತ್ನಿ ಡಾ.ದರ್ಶಿನಿ ಮತ್ತು ಪುತ್ರಿ ಹಂಸಾ ಅವರನ್ನು ಅಗಲಿದ್ದಾರೆ. ಇಲ್ಲಿಯ ತನ್ನ ನಿವಾಸದಲ್ಲಿ ಹೃದಯಾಘಾತವುಂಟಾಗಿ ಕುಸಿದುಬಿದ್ದಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಬದುಕುಳಿಯಲಿಲ್ಲ.
1957,ಮಾ.10ರಂದು ಕೇರಳದ ತಿರುವನಂತಪುರದಲ್ಲಿ ಜನಿಸಿದ್ದ ಪದ್ಮನಾಭನ್ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದರು. ತನ್ನ ಲೇಖನಗಳ ಮೂಲಕ ವಿಜ್ಞಾನವನ್ನು ಜನಪ್ರಿಯಗೊಳಿಸುವಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು. ಪುಣೆಯ ಇಂಟರ್ ಯುನಿವರ್ಸಿಟಿ ಸೆಂಟರ್ ಫಾರ್ ಆಸ್ಟ್ರಾನಮಿ ಆ್ಯಂಡ್ ಆ್ಯಸ್ಟ್ರೋಫಿಜಿಕ್ಸ್ನಲ್ಲಿ ಪ್ರೊಫೆಸರ್ ಆಗಿದ್ದ ಪದ್ಮನಾಭನ್ ಕಳೆದ ತಿಂಗಳು ಕೇರಳ ಸರಕಾರವು ರಾಜ್ಯದ ವಿಜ್ಞಾನಿಗಳಿಗೆ ನೀಡುವ ‘ಕೇರಳ ಶಾಸ್ತ್ರ ಪುರಸ್ಕಾರಂ ’2021ಕ್ಕೆ ಆಯ್ಕೆಯಾಗಿದ್ದರು.
ತನ್ನ 20ನೇ ವಯಸ್ಸಿನಲ್ಲಿಯೇ ಬಿಎಸ್ಸಿ ವಿದ್ಯಾರ್ಥಿಯಾಗಿದ್ದಾಗ ತನ್ನ ಪ್ರಥಮ ಸಂಶೋಧನಾ ಪ್ರಬಂಧವನ್ನು ಪ್ರಕಟಿಸಿದ್ದ ಅವರು ಕೇರಳದ ಯೂನಿವರ್ಸಿಟಿ ಕಾಲೇಜಿನಿಂದ ಬಿಎಸ್ಸಿ (1977) ಮತ್ತು ಎಂಎಸ್ಸಿ(1979) ಪೂರ್ಣಗೊಳಿಸಿದ್ದರು. ಎರಡೂ ಪದವಿಗಳಲ್ಲಿ ಚಿನ್ನದ ಪದಕಗಳನ್ನು ಅವರು ಗಳಿಸಿದ್ದರು.
ಕ್ವಾಂಟಮ್ ಸಿದ್ಧಾಂತ,ಗುರುತ್ವಾಕರ್ಷಣೆ,ವಿಶ್ವವಿಜ್ಞಾನ,ಬ್ರಹ್ಮಾಂಡ ರಚನೆ ಇತ್ಯಾದಿಗಳು ಅವರ ಆಸಕ್ತಿಯ ಕ್ಷೇತ್ರಗಳಾಗಿದ್ದವು.
‘ಸಾಮಾನ್ಯ ಸಾಪೇಕ್ಷತೆ ಮತ್ತು ಥರ್ಮೊಡೈನಾಮಿಕ್ಸ್ (ಉಷ್ಣಬಲ)ನ್ನು ಹೊಸ ರೀತಿಯಲ್ಲಿ ಜೋಡಣೆಗೊಳಿಸಿದ್ದ ಮತ್ತು ಇತರ ಕ್ಷೇತ್ರಗಳಲ್ಲಿಯ ಅವರ ಸಂಶೋಧನೆಗಳು ವ್ಯಾಪಕ ಮನ್ನಣೆ ಗಳಿಸಿದ್ದವು. ವಿದ್ವಾಂಸ,ಸಂವಹನಕಾರ,ಅಸಾಧಾರಣ ವಿಜ್ಞಾನಿಯಾಗಿದ್ದ ಅವರು ಅಪಾರ ಮಿತ್ರನ್ನು ಹೊಂದಿದ್ದರು. ಅವರನ್ನು ನಾವು ಕಳೆದುಕೊಂಡಿದ್ದೇವೆ ’ ಎಂದು ಭಾರತ ಸರಕಾರಕ್ಕೆ ಪ್ರಧಾನ ವೈಜ್ಞಾನಿಕ ಸಲಹೆಗಾರರಾಗಿರುವ ಕೆ.ವಿಜಯ ರಾಘವನ್ ಹೇಳಿದರು.