ಸದ್ಯಕ್ಕೆ ಕೋವಿಡ್ ಬೂಸ್ಟರ್ ಡೋಸ್ಗೆ ಚಾಲನೆ ನೀಡುವುದು ಅನೈತಿಕ ಕ್ರಮ : ಅದರ್ ಪೂನಾವಾಲಾ

ಅದರ್ ಪೂನಾವಾಲಾ (Photo : PTI)
ಬೆಂಗಳೂರು: ಹಲವು ದೇಶಗಳಲ್ಲಿ ಕೋವಿಡ್-19 ವಿರುದ್ಧದ ಬೂಸ್ಟರ್ ಡೋಸ್ ನೀಡಿಕೆಗೆ ಚಾಲನೆ ನೀಡಿದ್ದು, ಭಾರತದಲ್ಲಿ ಈ ವಿಚಾರ ಇನ್ನೂ ಚರ್ಚೆಯಲ್ಲಿದೆ. ಏತನ್ಮಧ್ಯೆ, ದೇಶದಲ್ಲಿ ಎರಡು ಡೋಸ್ಗಳನ್ನು ಪಡೆಯಲು ಕೂಡಾ ದೊಡ್ಡ ಸಂಖ್ಯೆಯ ಮಂದಿ ಬಾಕಿ ಇರುವ ಹಂತದಲ್ಲಿ ಬೂಸ್ಟರ್ ಡೋಸ್ಗೆ ಚಾಲನೆ ನೀಡುವುದು ಅನೈತಿಕ ಕ್ರಮ ಎಂದು ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಅದರ್ ಪೂನಾವಾಲಾ ಹೇಳಿದ್ದಾರೆ.
ಹಲವು ದೇಶಗಳಲ್ಲಿ ಬಹಳಷ್ಟು ಮಂದಿ ಇನ್ನೂ ಮೊದಲ ಡೋಸ್ ಕೂಡಾ ಪಡೆಯಲು ಸಾಧ್ಯವಾಗಿಲ್ಲ ಎಂದು ಅವರು ವಿವರಿಸಿದ್ದಾರೆ.
ಮೂರನೇ ಡೋಸ್ ಕಡ್ಡಾಯ ಹಾಗೂ ಎರಡನೇ ಡೋಸ್ ಪಡೆದ ಆರು ತಿಂಗಳ ಒಳಗಾಗಿ ಈ ಡೋಸ್ ಪಡೆಯಬೇಕು ಎಂದು ಎಸ್ಐಐ ಅಧ್ಯಕ್ಷ ಸೈರಸ್ ಪೂನಾವಾಲ ಹೇಳಿಕೆ ನೀಡಿದ ಬೆನ್ನಲ್ಲೇ ಅದರ್ ಹೇಳಿಕೆ ಅಚ್ಚರಿ ತಂದಿದೆ. ಬಯೋಕಾನ್ ಜತೆಗಿನ ಪ್ರಮುಖ ಪಾಲುದಾರಿಕೆ ಬಗೆಗಿನ ಘೋಷಣೆ ಕುರಿತ ಪತ್ರಿಕಾಗೋಷ್ಠಿಯಲ್ಲಿ ತಂದೆ ನೀಡಿದ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ ಅವರು, "ಸೋಂಕಿಗೆ ತುತ್ತಾಗುವ ಸಾಧ್ಯತೆ ಇರುವ ಕೆಲ ವರ್ಗಕ್ಕೆ ಬೂಸ್ಟರ್ ಡೋಸ್ ನೀಡಬಹುದು ಎಂಬ ಅರ್ಥದಲ್ಲಿ ತಂದೆಯವರು ಮಾತನಾಡಿರಬಹುದು" ಎಂದು ಹೇಳಿದರು.
ಮೂರನೇ ಡೋಸ್ ಅಗತ್ಯ ಎನ್ನುವುದನ್ನು ಸಾಬೀತುಪಡಿಸುವ ಯಾವ ಪುರಾವೆಯೂ ಇಲ್ಲ. ಅಧಿಕೃತವಾಗಿ ಇದನ್ನು ಶಿಫಾರಸ್ಸು ಮಾಡಿಲ್ಲ ಎಂದು ಸಮರ್ಥಿಸಿಕೊಂಡರು. ಮುಂದೆ ಬೂಸ್ಟರ್ ಡೋಸ್ ವಾರ್ಷಿಕವಾಗಿ ಬೇಕಾಗಬಹುದು. ಆದರೆ ಸದ್ಯಕ್ಕೆ ಅದು ಅಗತ್ಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
"ಸದ್ಯಕ್ಕೆ ಬೂಸ್ಟರ್ ಶಾಟ್ ಬಗ್ಗೆ ಚಿಂತಿಸುವುದು ಅನೈತಿಕ. ಆದಾಗ್ಯೂ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್, ಈಗಾಗಲೇ ಸಂಗ್ರಹಿಸಿರುವ ಅಂಕಿ ಅಂಶಗಳ ಆಧಾರದಲ್ಲಿ ಮುಂದಿನ ನಿರ್ಧಾರ ಕೈಗೊಳ್ಳಬಹುದು" ಎಂದು ಸ್ಪಷ್ಟಪಡಿಸಿದರು.