ಅಫ್ಘಾನ್ ಮಕ್ಕಳು ನಮ್ಮ ಮಕ್ಕಳು: ಕೈಲಾಷ್ ಸತ್ಯಾರ್ಥಿ

ಹೊಸದಿಲ್ಲಿ,ಸೆ.18: ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳ (ಎಸ್ ಡಿಜಿ) ಪ್ರತಿಪಾದಕರಾಗಿ ಶುಕ್ರವಾರ ನೇಮಕಗೊಂಡಿರುವ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಕೈಲಾಷ್ ಸತ್ಯಾರ್ಥಿ ಅವರು ಅಫ್ಘಾನ್ ಮಕ್ಕಳಿಗೆ ಬೆಂಬಲ ಸೂಚಿಸಿದ್ದಾರೆ. ತಾಲಿಬಾನ್ ಆಡಳಿತದಡಿ ಮಾನವೀಯ ಬಿಕ್ಕಟ್ಟಿನ ನಡುವೆ ಈ ಮಕ್ಕಳ ಭವಿಷ್ಯದ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ‘ಅಫ್ಘಾನ್ ಮಕ್ಕಳು ನಮ್ಮ ಮಕ್ಕಳು. ಭವಿಷ್ಯದ ಪೀಳಿಗೆಗಳಿಗೆ ಅವರಿಗೆ ಅರ್ಹವಾದುದನ್ನು ನೀಡೋಣ,ಅವರಿಗೆ ಬೇಕಾದದ್ದನ್ನು ಅಲ್ಲ ’ಎಂದು ಆಂಗ್ಲ ನಿಯತಕಾಲಿಕಕ್ಕೆ ನೀಡಿದ ಸಂದರ್ಶನದಲ್ಲಿ ಸತ್ಯಾರ್ಥಿ ಹೇಳಿದರು.
ಮಕ್ಕಳ ಹಕ್ಕುಗಳಿಗಾಗಿ ತನ್ನ ಹೋರಾಟವನ್ನು ಮುಂದುವರಿಸುವುದಾಗಿ ತಿಳಿಸಿದ ಅವರು,ಈ ದುರ್ಬಲ ವರ್ಗದತ್ತ ಗಮನವನ್ನು ಸೆಳೆಯುವುದಾಗಿ ಹೇಳಿದರು.
‘ಜಾಗತಿಕ ಸಮುದಾಯವು ನಮ್ಮ ಮಕ್ಕಳನ್ನು ವಿಫಲಗೊಳಿಸಿದೆ. ಭವಿಷ್ಯದ ಪೀಳಿಗೆಯು ಘನತೆಯೊಂದಿಗೆ ಬಾಳುವಂತಾಗಲು ನಮ್ಮ ಕರ್ತವ್ಯವನ್ನು ನಿರ್ವಹಿಸಬೇಕಿದೆ ’ ಎಂದ ಸತ್ಯಾರ್ಥಿ,ಕೋವಿಡ್ ಸಾಂಕ್ರಾಮಿಕವು ದುರ್ಬಲ ಮಕ್ಕಳ ಸಂಕಷ್ಟಗಳನ್ನು ಇನ್ನಷ್ಟು ಹೆಚ್ಚಿಸಿದೆ ಮತ್ತು ಈಗ ಹಿಂದೆಂದಿಗಿಂತ ಹೆಚ್ಚಾಗಿ ಅವರಿಗೆ ನೆರವಾಗುವ ಮತ್ತು ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ತುರ್ತು ಅಗತ್ಯವಿದೆ ಎಂದರು.
ಪ್ರತಿ ಮಗು ಸ್ವತಂತ್ರ,ಸುರಕ್ಷಿತ,ಆರೋಗ್ಯವಂತ ಮತ್ತು ಸುಶಿಕ್ಷಿತವಾದಾಗ ಮಾತ್ರ ಶಾಂತಿ,ನ್ಯಾಯ ಮತ್ತು ಸುಸ್ಥಿರತೆಯನ್ನು ಸಾಧಿಸಬಹುದು ಎಂದು ಸತ್ಯಾರ್ಥಿ ಈ ಹಿಂದೆ ಹೇಳಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.
ಹಿಂಸೆಯ ಅಪಾಯದಲ್ಲಿರುವ ಮಕ್ಕಳ ರಕ್ಷಣೆಗಾಗಿ ದಶಕಗಳಿಂದಲೂ ಕೆಲಸ ಮಾಡುತ್ತಿರುವ ಸತ್ಯಾರ್ಥಿ,ತನ್ನ ಮಕ್ಕಳ ಪ್ರತಿಷ್ಠಾನದ ಮೂಲಕ ಬಾಲಕಾರ್ಮಿಕ ಪಿಡುಗಿನ ಮೇಲೆ ಬೆಳಕು ಚೆಲ್ಲಿದ್ದಾರೆ ಮತ್ತು ಶೋಷಿತ ಹಾಗೂ ನಿರ್ಲಕ್ಷಿತ ಮಕ್ಕಳಿಗೆ ಆದ್ಯತೆ ನೀಡಬೇಕು ಎಂದು ಪ್ರತಿಪಾದಿಸುತ್ತ ಬಂದಿದ್ದಾರೆ.