ದೇಶಕ್ಕಲ್ಲ ಕಾಂಗ್ರೆಸ್‌ಗೆ ನಿರುದ್ಯೋಗ ಸಮಸ್ಯೆ: ಬಿ.ವೈ. ವಿಜಯೇಂದ್ರ

ಶಿವಮೊಗ್ಗ: ನಿರುದ್ಯೋಗದ ಸಮಸ್ಯೆ ದೇಶದ ಜನರಿಗಲ್ಲ, ಕಾಂಗ್ರೆಸ್ ಪಕ್ಷದವರಿಗೆ ಕಾಡುತ್ತಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಸ್ತಿತ್ವ ಕಳೆದುಕೊಂಡಿರುವ ಕಾಂಗ್ರೆಸ್ ನಿರುದ್ಯೋಗದ ಬಗ್ಗೆ ಮಾತನಾಡುತ್ತಿದೆ. ಮೋದಿ ಪ್ರಧಾನಿ ಆದ ಬಳಿಕ ಕಾಂಗ್ರೆಸ್ಸಿಗರಿಗೆ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ ಎಂದರು.
ಕಾಂಗ್ರೆಸ್ಸಿಗರಿಗೆ ಏನು ಮಾಡಬೇಕು, ಯಾವ ರೀತಿ ಅವರ ಅಸ್ತಿತ್ವ ಉಳಿಸಿಕೊಳ್ಳಬೇಕು ಎಂಬುದು ತಿಳಿಯುತ್ತಿಲ್ಲ. ಪಕ್ಷಕ್ಕೆ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಹೇಳಿದರು.
ಮೋದಿ ಅವರ ಜನ್ಮದಿನವನ್ನು ನಿರುದ್ಯೋಗ ದಿನವೆಂದು ಕಾಂಗ್ರೆಸ್ ಆಚರಿಸಿದೆ. ಒಂದು ವೇಳೆ, ಕಾಂಗ್ರೆಸ್‌ನವರಿಗೆ ನಿರುದ್ಯೋಗ ಇದ್ದು, ಕಳುಹಿಸಿಕೊಟ್ಟರೆ ಅವರಿಗೆ ನರೇಗಾ ಯೋಜನೆಯಲ್ಲಿ ಕೆಲಸ ನೀಡುತ್ತೇವೆ ಎಂದು ಅವರು ಹೇಳಿದರು.
ಮೋದಿ ಅವರ ನಾಯಕತ್ವ ಕೇವಲ ಭಾರತಕ್ಕಷ್ಟೇ ಅಲ್ಲ, ಇಡೀ ಪ್ರಪಂಚ ಮೋದಿಯವರನ್ನು ಮೆಚ್ಚಿಕೊಂಡಿದೆ. ಅವರು ಹಲವು ಯೋಜನೆಗಳನ್ನು ಕೊಟ್ಟಿದ್ದಾರೆ. ಬಿಜೆಪಿಯು ಮೋದಿಯವರ ಹುಟ್ಟು ಹಬ್ಬವನ್ನು ಸೇವಾ ಮನೋಭಾವದಿಂದ ಆಚರಿಸಿದೆ. ಹೀಗಿರುವಾಗ, ಕಾಂಗ್ರೆಸ್‌ನವರು ಮಾತ್ರ ವಿರೋಧಿಸುತ್ತಿದ್ದಾರೆ ಎಂದು ಹೇಳಿದರು.
ಮುಂಬರುವ ಚುನಾವಣೆ ಬಗ್ಗೆ ಚರ್ಚೆ: ದಾವಣಗೆರೆಯಲ್ಲಿ ನಡೆಯುತ್ತಿರುವ ಕಾರ್ಯಕಾರಿಣಿ ಸಭೆಯಲ್ಲಿ ಪ್ರಚಲಿತ ರಾಜಕೀಯ, ಮುಂದೆ ಬರುವ ವಿಧಾನಸಭೆ ಉಪ ಚುನಾವಣೆ, ವಿಧಾನ ಪರಿಷತ್ ಚುನಾವಣೆ, ಜಿ.ಪಂ. ಹಾಗು ತಾ.ಪಂ. ಚುನಾವಣೆ ಬಗ್ಗೆ ಚರ್ಚೆಯಾಗುತ್ತದೆ ಎಂದರು.
ನನಗೆ ಸಚಿವ ಸ್ಥಾನ ಕೊಡಬೇಕು ಎಂದು ಯಡಿಯೂರಪ್ಪ ಅವರಾಗಲಿ, ನಾನಾಗಲಿ ಚರ್ಚೆ ನಡೆಸಿಲ್ಲ. ಸದ್ಯ ಉಪಾಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ. ಪಕ್ಷ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.