ಪ್ಯಾರಾಲಿಂಪಿಕ್ಸ್ ಪದಕದ ಕಾರಣದಿಂದ ನನ್ನ ಸಾಲ ಸಂದಾಯವಾಗಬಹುದೆಂದು ಭಾವಿಸಿದ್ದೆ: ಕಂಚು ವಂಚಿತ ವಿನೋದ್ ಕುಮಾರ್
"ನನ್ನ ಮಗಳು ಈಗಲೂ ತಂದೆ ಪದಕ ಗೆದ್ದಿದ್ದಾರೆಂದೇ ಭಾವಿಸಿದ್ದಾಳೆ"
ವಿನೋದ್ ಕುಮಾರ್ (File Photo: PTI)
ಹೊಸದಿಲ್ಲಿ: ವಿನೋದ್ ಕುಮಾರ್ ಗೆ ಪ್ಯಾರಾಲಿಂಪಿಕ್ ಡಿಸ್ಕಸ್ ಥ್ರೋ (ಎಫ್ 52)ನಲ್ಲಿ ಕಂಚಿನ ಪದಕ ಕೈತಪ್ಪಿ ಒಂದು ವಾರಕ್ಕೂ ಅಧಿಕ ಸಮಯವಾಗಿದ್ದರೂ ಅವರ ಮಗಳು ತನ್ನ ತಂದೆ ಪ್ಯಾರಾಲಿಂಪಿಕ್ಸ್ ಪದಕ ವಿಜೇತರಾಗಿದ್ದಾರೆ ಎಂದು ನಂಬಿದ್ದಾಳೆ.
7 ವರ್ಷದ ಸಾಕ್ಷಿ ತನ್ನ ತಂದೆ ಮೂರನೇ ಸ್ಥಾನ ಪಡೆಯುವುದನ್ನು ಗೇಮ್ಸ್ ನ ನೇರ ಪ್ರಸಾರದಲ್ಲಿ ನೋಡಿದ್ದಳು. ಆದರೆ ನಂತರ ನಡೆದ ಬೆಳವಣಿಗೆಯ ಕುರಿತು ಆಕೆಗೆ ಅರಿವಿಲ್ಲ.
"ತನ್ನ ತಂದೆ ಟೋಕಿಯೊದಿಂದ ಪದಕವನ್ನು ಗೆದ್ದುಕೊಂಡು ಮನೆಗೆ ಮರಳಿದ್ದಾರೆ ಎಂದು ಮಗಳು ಈಗಲೂ ಭಾವಿಸಿದ್ದಾಳೆ" ಎಂದು ವಿನೋದ್ ಅವರ ಪತ್ನಿ ಅನಿತಾ ಹೇಳುತ್ತಾರೆ.
ವಿನೋದ್ ಟೋಕಿಯೊದಲ್ಲಿ ನಡೆದ ಪುರುಷರ ಡಿಸ್ಕಸ್ ಕ್ರೀಡಾಕೂಟದ ಎಫ್ 52 ವಿಭಾಗದಲ್ಲಿ 19.91 ಮೀಟರ್ ದೂರಕ್ಕೆ ಡಿಸ್ಕಸ್ ಎಸೆದು ವೃತ್ತಿಜೀವನದ ಅತ್ಯುತ್ತಮ ಪ್ರಯತ್ನದೊಂದಿಗೆ ಕಂಚಿನ ಪದಕವನ್ನು ಖಚಿತಪಡಿಸಿದ್ದರು. ತನ್ನ ಈ ಸಾಧನೆಗೆ 41 ವರ್ಷದ ವಿನೋದ್ ಗೆ ಖುಷಿ ಇತ್ತು. ಆದರೆ ಫಲಿತಾಂಶವನ್ನು ವರ್ಗೀಕರಣ ಪರಿಶೀಲನೆಗಾಗಿ ತಡೆಹಿಡಿಯಲಾಗಿತ್ತು. ಮರುದಿನ ಬೆಳಿಗ್ಗೆ ಮೌಲ್ಯಮಾಪನದ ನಂತರ, ಸಮಿತಿಯು ವಿನೋದ್ ಅವರನ್ನುಎಫ್ 52 ವಿಭಾಗಕ್ಕೆ ಅನರ್ಹ ಎಂದು ಪರಿಗಣಿಸಿತ್ತು. ಹೀಗಾಗಿ ಅವರಿಗೆ ಕಂಚಿನ ಪದಕ ಕೈತಪ್ಪಿತ್ತು.
"ನಾವು ಈಗಾಗಲೇ ನಮ್ಮ ನೆರೆಹೊರೆಯವರಿಗೆ ಸಿಹಿತಿಂಡಿಗಳನ್ನು ವಿತರಿಸಿದ್ದೇವೆ. ಅವರ ಗೆಲುವನ್ನು ಸಂಭ್ರಮಿಸಿದ್ದೆವು" ಎಂದು ಅನಿತಾ ನೆನಪಿಸಿಕೊಳ್ಳುತ್ತಾರೆ.
"ಒಲಿಂಪಿಕ್ಸ್ ಪದಕ ಗೆದ್ದ ನಂತರ ನಮ್ಮ ಜೀವನ ಬದಲಾಗುತ್ತದೆ ಎಂದು ನಾವು ಭಾವಿಸಿದ್ದೆವು. ಆದರೆ ಆ ರಾತ್ರಿ ನನ್ನ ಪತಿ ನನ್ನನ್ನು ಕರೆದು ಫಲಿತಾಂಶಗಳನ್ನು ತಡೆಹಿಡಿಯಲಾಗಿದೆ ಎಂದು ಹೇಳಿದ್ದರು. ಆದರೆ ಮರುದಿನ ವಿನೋದ್, ಕಣ್ಣೀರು ಹಾಕುತ್ತಾ ತಾನು ಪದಕದೊಂದಿಗೆ ಹಿಂತಿರುಗುವುದಿಲ್ಲ ಎಂದು ತಿಳಿಸಿದ್ದರು’’ ಎಂದು ಅನಿತಾ ಹೇಳಿದ್ದಾರೆ.
"ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವ ಮೂಲಕ ನನ್ನ ಮಕ್ಕಳಿಗೆ ಮನೆ ಖರೀದಿಸಲು ಸಾಧ್ಯವಾಗುತ್ತದೆ ಹಾಗೂ ನನ್ನ ಸಾಲದ ಕಂತುಗಳು ಬಗೆಹರಿಯಲಿದೆ ಎಂದು ನಾನು ಭಾವಿಸಿದ್ದೆ. ನನ್ನ ಸಹೋದರಿಯಿಂದ ಎರವಲು ಪಡೆದ ಹಣವನ್ನು ಸಹ ಹಿಂದಿರುಗಿಸಬಹುದು ಭಾವಿಸಿದ್ದೆ” ಎಂದು ವಿನೋದ್ ಹೇಳಿದರು.
"ನನ್ನ ಕೈಯಿಂದ ಜಾರಿಹೋದ ಪದಕದ ಬಗ್ಗೆ ದಿನವಿಡೀ ಕುಳಿತು ಯೋಚಿಸಲು ನಾನು ಬಯಸುವುದಿಲ್ಲ, ಆದರೆ ನಾನು ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಗೆ ತರಬೇತಿ ಪಡೆಯಲು ಬಯಸುತ್ತೇನೆ. ನನಗೆ ಸ್ವಲ್ಪ ಬೆಂಬಲ ಬೇಕು. ಇಲ್ಲದಿದ್ದರೆ ನಾನು ಕ್ರೀಡೆಗಳನ್ನು ತ್ಯಜಿಸಬೇಕಾಗುತ್ತದೆ. ಇದೀಗ, ನನ್ನ ಕುಟುಂಬದ ಖರ್ಚನ್ನು ನೋಡಿಕೊಳ್ಳುವುದು ಕೂಡ ಕಷ್ಟವಾಗಿದೆ. ನನಗೆ ಯಾವುದೇ ಆದಾಯದ ಮೂಲವಿಲ್ಲದಿರುವಾಗ ನಾನು ಹೇಗೆ ಸ್ಪರ್ಧಿಸಲು ಸಾಧ್ಯವಾಗುತ್ತದೆ? ವಿನೋದ್ ಕೇಳುತ್ತಾರೆ.
2002 ರಲ್ಲಿ ಲೇಹ್ನಲ್ಲಿ ಗಡಿ ಭದ್ರತಾ ಪಡೆಯೊಂದಿಗೆ ತರಬೇತಿ ಪಡೆಯುತ್ತಿದ್ದಾಗ, ವಿನೋದ್ ಅವರು ಬಂಡೆಯಿಂದ ಬಿದ್ದರು. ಅವರ ಎರಡೂ ಕಾಲುಗಳಿಗೆ ದೊಡ್ಡ ಶಸ್ತ್ರಚಿಕಿತ್ಸೆ ಅಗತ್ಯವಿತ್ತು ಹಾಗೂ ಸುಮಾರು 10 ವರ್ಷ ಹಾಸಿಗೆಯಲ್ಲಿಯೇ ಇದ್ದರು.
ಕೃಪೆ: indianexpress.com