ಮಾಸಿಕ ಪರಿಹಾರ ಸ್ಥಗಿತ: ಕೇಂದ್ರ ಸರಕಾರದ ವಿರುದ್ಧ ನೂರಾರು ಕಾಶ್ಮೀರಿ ಪಂಡಿತರ ಪ್ರತಿಭಟನೆ
"ಕಳೆದ ಮೂರು ದಶಕಗಳಲ್ಲಿ ಮಾಸಿಕ ಪರಿಹಾರ ಬಿಡುಗಡೆ ವಿಳಂಬವಾಗುತ್ತಿರುವುದು ಇದೇ ಮೊದಲು"

Photo: ValleyExpressN1/Twitter
ಶ್ರೀನಗರ: ತಮಗೆ ನೀಡಬೇಕಾಗಿದ್ದ ಮಾಸಿಕ ಪರಿಹಾರವನ್ನು ಕಾರಣವಿಲ್ಲದೇ ವಿಳಂಬ ಮಾಡಲಾಗುತ್ತಿದೆ ಎಂದು ನೂರಾರು ಮಂದಿ ಕಾಶ್ಮೀರಿ ಪಂಡಿತರು ಜಮ್ಮುವಿನಲ್ಲಿ ಶನಿವಾರ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ ಎಂದು PTI ವರದಿ ಮಾಡಿದೆ. ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ತಡೆಯಲು ಯತ್ನಿಸಿದ ಕಾಶ್ಮೀರಿ ಪಂಡಿತರನ್ನು ಪೊಲೀಸರು ನಿಯಂತ್ರಿಸಿದ್ದಾರೆ ಎಂದು ವರದಿ ತಿಳಿಸಿದೆ.
1990ರ ದಶಕದ ಆರಂಭದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರವಾದ ಸ್ಫೋಟಗೊಂಡಿದ್ದ ಸಂದರ್ಭದಲ್ಲಿ ಕಣಿವೆ ಪ್ರದೇಶದಿಂದ ಭಾರೀ ಸಂಖ್ಯೆಯ ಕಾಶ್ಮೀರಿ ಪಂಡಿತರು ವಲಸೆ ಹೋಗಿದ್ದರು. ಒಟ್ಟು 76,000 ಕುಟುಂಬಗಳು ಕಾಶ್ಮೀರವನ್ನು ತೊರೆದಿತ್ತು ಎಂದು ಅಂದಾಜಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ.
1990ರಲ್ಲಿ ಜಮ್ಮು ಮತ್ತು ಕಾಶ್ಮೀರ ಸರಕಾರವು ಕಾಶ್ಮೀರಿ ಪಂಡಿತರಿಗೆ ನಗದು ಹಾಗೂ ಉಚಿತ ಪಡಿತರ ರೂಪದಲ್ಲಿ ಪರಿಹಾರ ನೀಡಲು ಆರಂಭಿಸಿತ್ತು. ಕಾಲಾಂತರದಲ್ಲಿ ಪರಿಹಾರದ ಮೊತ್ತವನ್ನೂ ಏರಿಸಲಾಗಿತ್ತು. ಪ್ರಸ್ತುತ ಪ್ರತಿ ಕುಟುಂಬಗಳು 13,000ರೂ.ಯನ್ನು ಮಾಸಿಕ ಪರಿಹಾರವಾಗಿ ಪಡೆಯುತ್ತಿದೆ.
ಸಂವಿಧಾನದ 370 ನೇ ವಿಧಿಯ ಅಡಿಯಲ್ಲಿ ಅದರ ವಿಶೇಷ ಸ್ಥಾನಮಾನವನ್ನು ಆಗಸ್ಟ್ 5, 2019 ರಂದು ರದ್ದುಗೊಳಿಸಿದ ನಂತರ ಜಮ್ಮು ಮತ್ತು ಕಾಶ್ಮೀರವು ಕೇಂದ್ರಾಡಳಿತ ಪ್ರದೇಶವಾಗಿ ಪರಿಣಮಿಸಿದ್ದರಿಂದ ಈ ಮೊತ್ತವನ್ನು ಈಗ ಕೇಂದ್ರ ಸರಕಾರ ನೀಡಬೇಕಾಗಿದೆ.
ಶನಿವಾರ, ಜಮ್ಮುವಿನ ಹೊರವಲಯದಲ್ಲಿರುವ ಜಗತಿ ವಲಸಿಗರ ಶಿಬಿರದಲ್ಲಿ ವಾಸಿಸುತ್ತಿರುವ ಕಾಶ್ಮೀರಿ ಪಂಡಿತರು ಆಗಸ್ಟ್ ತಿಂಗಳ ಪರಿಹಾರ ಪಾವತಿಯನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಘೋಷಣೆಗಳನ್ನು ಕೂಗಿದರು ಮತ್ತು ಜಮ್ಮು-ಶ್ರೀನಗರ ಹೆದ್ದಾರಿಯ ಕಡೆಗೆ ಮೆರವಣಿಗೆ ನಡೆಸಿದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆಗಸ್ಟ್ ತಿಂಗಳ ಪರಿಹಾರವನ್ನು ಪರಿಹಾರ ಆಯೋಗವು ಇಲ್ಲಿಯವರೆಗೆ ಬಿಡುಗಡೆ ಮಾಡಿಲ್ಲ, ಇದು ನಮ್ಮ ಸಮುದಾಯಕ್ಕೆ ತೊಂದರೆ ಉಂಟುಮಾಡಿದೆ" ಎಂದು ಕಾಶ್ಮೀರಿ ಪಂಡಿತ್ ರಿಲೀಫ್ ಹೋಲ್ಡರ್ಸ್ ಅಸೋಸಿಯೇಶನ್ನ ವಕ್ತಾರರು ಪಿಟಿಐಗೆ ತಿಳಿಸಿದರು. ಕಳೆದ ಮೂರು ದಶಕಗಳಲ್ಲಿ ಮಾಸಿಕ ಪರಿಹಾರ ಬಿಡುಗಡೆ ವಿಳಂಬವಾಗುತ್ತಿರುವುದು ಇದೇ ಮೊದಲು ಎಂದು ಅವರು ಹೇಳಿದ್ದು, ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಈ ವಿಷಯವನ್ನು ಪರಿಶೀಲಿಸುವಂತೆ ವಕ್ತಾರರು ಒತ್ತಾಯಿಸಿದರು.
Kashmiri Pandits are protesting against BJP govt in J&K as Relief of about 13,000 families has stopped due to mismanagement by Modi govt. But wait why don't we see national media covering this & why aren't Self Proclaimed KP leaders & BJP backed organizations, talking about this? pic.twitter.com/ctEsedRWWt
— Gulvinder (@rebelliousdogra) September 18, 2021