ವಂ.ಚೇತನ್ ಲೋಬೊಗೆ ಫ್ರಾನ್ಸಿಸ್ ದಾಂತಿ ಸಾಹಿತ್ಯ ಪುರಸ್ಕಾರ ಪ್ರದಾನ

ಉಡುಪಿ, ಸೆ.19: ಇಂದಿನ ಯುವ ಸಮುದಾಯ ಮಾತೃ ಭಾಷೆಯನ್ನು ಮರೆತು ಪಾಶ್ಚಾತ್ಯ ಭಾಷೆಗಳಿಗೆ ಹೆಚ್ಚಿನ ಒಲವು ತೋರಿಸುತ್ತಿರುವುದು ಖೇದಕರ ಸಂಗತಿಯಾಗಿದೆ. ಮಾತೃಭಾಷೆಯನ್ನು ನಮ್ಮ ದೈನಂದಿನ ಜೀವನದಲ್ಲಿ ಹೆಚ್ಚು ಬಳಸುವಂತಾಗಬೇಕು ಎಂದು ಉಡುಪಿ ಧರ್ಮ ಪ್ರಾಂತ್ಯದ ಕುಲಪತಿ ಹಾಗೂ ಉದ್ಯಾವರ ಚರ್ಚಿನ ಧರ್ಮಗುರು ವಂ.ಸ್ಟ್ಯಾನಿ ಬಿ.ಲೋಬೊ ಹೇಳಿದ್ದಾರೆ.
ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಇದರ 2020-21ನೇ ಸಾಲಿನ ವಾರ್ಷಿಕ ಮಹಾಸಭೆ, ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ ಹಾಗೂ ಡೆನಿಸ್ ಡಿಸಿಲ್ವಾ ಸ್ಮಾರಕ ಲೇಖನ ಸ್ಪರ್ಧೆಯ ಪುರಸ್ಕಾರ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ರವಿವಾರ ಮಾತನಾಡುತಿದ್ದರು.
ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ, ಲೇಖಕ ವಂ.ಚೇತನ್ ಲೋಬೊ ಅವರ ಚೇತನ ಚಿಂತನ ಕೃತಿಗೆ ಈ ಸಾಲಿನ ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ ನೀಡಿ ಗೌರವಿಸಲಾಯಿತು. ಡಾ.ಜೆರಾಲ್ಡ್ ಪಿಂಟೊ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿದರು.
ಇದೇ ವೇಳೆ ಡೆನಿಸ್ ಡಿಸಿಲ್ವಾ ಸ್ಮಾರಕ ಲೇಖನ ಸ್ಪರ್ಧೆಯ ಬಹುಮಾನ ವಿತರಣೆಯನ್ನು ಮಾಡಲಾಯಿತು. ಆಲ್ಫೋನ್ಸ್ ಡಿಕೋಸ್ತಾ ಬಹುಮಾನಿತರ ವಿವರಗಳನ್ನು ವಾಚಿಸಿದರು. ಉಡುಪಿ ಧರ್ಮಪ್ರಾಂತ್ಯದ ಉಜ್ವಾಡ್ ಪ್ರಕಾಶನ ಹೊರತಂದಿರುವ ಜೋಸೆಫ್ ಕ್ವಾಡ್ರಸ್ ಅವರ ವಿನೋದ ಬರಹಗಳ ಓಲ್ಡ್ ಮೆನ್ಸ್ ಕ್ಲಬ್ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಉಜ್ವಾಡ್ ಪತ್ರಿಕೆಯ ಸಂಪಾದಕ ವಂ.ರೊಯ್ಸನ್ ಫೆರ್ನಾಂಡಿಸ್ ಪುಸ್ತಕದ ಪರಿಚಯ ಮಾಡಿದರು.
ಕೆಥೊಲಿಕ್ ಸಭೆಯ ಸ್ಥಾಪಕಾಧ್ಯಕ್ಷ ಆಸ್ಕರ್ ಫೆರ್ನಾಂಡಿಸ್‌ಗೆ ಶೃದ್ಧಾಂಜಲಿ ಅರ್ಪಿಸಲಾಯಿತು. ಸಂಘಟನೆಯ ಮಾಜಿ ಅಧ್ಯಕ್ಷ ಅಲ್ಫೋನ್ಸ್ ಡಿಕೋಸ್ತಾ ಆಸ್ಕರ್ಗೆ ನುಡಿನಮನ ಸಲ್ಲಿಸಿದರು. ಮಹಾಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷ ಮೇರಿ ಡಿಸೋಜ ವಹಿಸಿದ್ದರು.
ಸಂಸ್ಥೆಯ ಆಧ್ಯಾತ್ಮಿಕ ನಿರ್ದೇಶಕ ವಂ.ಫರ್ಡಿನಾಂಡ್ ಗೊನ್ಸಾಲ್ವಿಸ್, ನಿಕಟ ಪೂರ್ವ ಅಧ್ಯಕ್ಷ ರೊಬರ್ಟ್ ಮಿನೇಜಸ್, ಮಾಜಿ ಅಧ್ಯಕ್ಷ ವಲೇರಿಯನ್ ಫೆರ್ನಾಂಡಿಸ್, ವಲಯದ ಅಧ್ಯಕ್ಷರುಗಳಾದ ಲವೀನಾ ಪಿರೇರಾ ಉಡುಪಿ, ಲೀನಾ ಮಚಾದೋ ಶಿರ್ವ, ಲೂಯಿಸ್ ಡಿಸೋಜಾ ಕಲ್ಯಾಣಪುರ, ಮೇಬಲ್ ಡಿಸೋಜ ಕುಂದಾಪುರ, ಸೊಲೋಮನ್ ಅಲ್ವಾರಿಸ್ ಕಾರ್ಕಳ ಉಪಸ್ಥಿತರಿದ್ದರು.
ನಿಯೋಜಿತ ಅಧ್ಯಕ್ಷ ಸಂತೋಷ್ ಕರ್ನೆಲಿಯೋ ಸ್ವಾಗತಿಸಿ, ಕಾರ್ಯದರ್ಶಿ ಗ್ರೆಗೋರಿ ಪಿಕೆ ಡಿಸೋಜ ವಂದಿಸಿದರು. ಮೇಬಲ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.







