ಕೇಂದ್ರ ಸರಕಾರದ ಉದ್ಯಮ ನೀತಿಗೆ ವಿರೋಧ: ಸೆ.22ರಂದು ಜಮ್ಮು ಬಂದ್ ಗೆ ವರ್ತಕರ ಕರೆ
ಜಮ್ಮು,ಸೆ.19: ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಂಡ ಆನಂತರ ಇದೇ ಮೊದಲ ಬಾರಿಗೆ ಜಮ್ಮುಕಾಶ್ಮೀರ ವಾಣಿಜ್ಯ ಹಾಗೂ ಕೈಗಾರಿಕಾ ಮಂಡಳಿಯು ಕಳೆದ ಎರಡು ವರ್ಷಗಳಲ್ಲಿ ಸರಕಾರ ಜಾರಿಗೊಳಿಸಿದ ಪ್ರತಿಕೂಲಕರವಾದ ಉದ್ಯಮ ಸಂಬಂಧಿತ ನಿರ್ಧಾರಗಳು ಉದ್ಯಮರಂಗಕ್ಕೆ ಧಕ್ಕೆಯುಂಟು ಮಾಡಿದ್ದು, ಇದನ್ನು ಪ್ರತಿಭಟಿಸಿ ಸೆಪ್ಟೆಂಬರ್ 22ರಂದು ಜಮ್ಮುಬಂದ್ಗೆ ಕರೆ ನೀಡಿರುವುದಾಗಿ ತಿಳಿಸಿದೆ.
ಜಮ್ಮುವಿನಲ್ಲಿ 100 ಅಂಗಡಿಮಳಿಗೆಗಳನ್ನು ತೆರೆಯುವ ಬಗ್ಗೆ ರಿಲಾಯನ್ಸ್ನಂತಹ ಬೃಹತ್ ಕಂಪೆನಿಗಳಿಗೆ ಅನುಮತಿ ನೀಡುವ ಪ್ರಸ್ತಾವವು ಅಲ್ಲಿನ ಉದ್ಯಮ ಸಮುದಾಯದಲ್ಲಿ ಕಳವಳಕ್ಕೆ ಕಾರಣವಾಗಿದೆ. ಇದನ್ನು ಪ್ರತಿಭಟಿಸಿ ಸೆ.22ರಂದು ಜಮ್ಮುಬಂದ್ಗೆ ಕರೆ ನೀಡಿರುವುದಾಗಿ ಜಮ್ಮು ವಾಣಿಜ್ಯ ಹಾಗೂ ಕೈಗಾರಿಕಾ ಮಂಡಳಿ ಅಧ್ಯಕ್ಷ ಅರುಣ್ ಗುಪ್ತಾ ತಿಳಿಸಿದ್ದಾರೆ.
‘‘ಜಮ್ಮುವಿನಲ್ಲಿ ರಿಲಾಯನ್ಸ್ ಒಂದಲ್ಲ, ನೂರಾರು ಮಳಿಗೆಗಳನ್ನು ತೆರೆಯಲು ಹೊರಟಿದೆ. ಹಾಗಾದಲ್ಲಿ ನಾವು ಸಣ್ಣ ವ್ಯಾಪಾರಿಗಳು ಎಲ್ಲಿಗೆ ಹೋಗಬೇಕು’’ ಎಂದವರು ಪ್ರಶ್ನಿಸಿದರು.
ರಿಲಾಯನ್ಸ್ ಬಲಿಷ್ಠವಾದ ಮೂಲ ಸೌಕರ್ಯ ಹಾಗೂ ಮಾನವಶಕ್ತಿಯನ್ನು ಹೊಂದಿದೆ. ಅದರ ಜೊತೆ ಸ್ಪರ್ಧಿಸಲು ಸಣ್ಣವ್ಯಾಪಾರಿಗಳಿಗೆ ಸಾಧ್ಯವಿಲ್ಲ. ರಿಲಾಯನ್ಸ್ ಜಮ್ಮವಿನಲ್ಲಿ 1000 ಮಂದಿ ಯುವಜನರಿಗೇನೋ ಉದ್ಯೋಗ ನೀಡಬಹುದು. ಆದರೆ ಸುಮಾರು 20 ಸಾವಿರ ಸಣ್ಣ ಅಂಗಡಿಗಳು ಮುಚ್ಚಲಿವೆ’’ ಎಂದು ಅರುಣ್ಗುಪ್ತಾ ಆತಂಕ ವ್ಯಕ್ತಪಡಿಸಿದರು.
ಕಳೆದ ಎಂಟು ತಿಂಗಳುಗಳಲ್ಲಿ ಜಮ್ಮುವಿನ ವಾಣಿಜ್ಯರಂಗವನ್ನು ಸರಕಾರವು ವಿಚಲಿತಗೊಳಿಸಿದೆ. ಇಲ್ಲಿನ ಉದ್ಯಮ ಸಮುದಾಯದ ಪರಿಸ್ಥಿತಿಯ ಬಗ್ಗೆ ಸರಕಾರವು ಯಾವುದೇ ಚರ್ಚೆ,ಸಮಾಲೋಚನೆಗಳನ್ನು ನಡೆಸದಿರುವುದು ಒಂದು ದುರಂತವೆಂದು ಅವರು ಆಘಾತ ವ್ಯಕ್ತಪಡಿಸಿದರು.
1988-89ರಲ್ಲಿ ಆಗಿನ ಫಾರೂಕ್ ಅಬ್ದುಲ್ಲಾ ಸರಕಾರವು ಚಳಿಗಾಲದಲ್ಲಿ ಸಚಿವಾಲಯ ಹಾಗೂ ಸರಕಾರದ ಕಾರ್ಯಾಲಯಗಳನ್ನು ಜಮ್ಮುವಿಗೆ ವರ್ಗಾವಣೆ (ದರ್ಬಾರ್ ಮೂವ್) ಮಾಡುವುದಿಲ್ಲವೆಂದು ಹೇಳಿದಾಗ ಜಮ್ಮುವಿನ ಜನತೆ ಅದನ್ನು ವಿರೋಧಿಸಿ 23 ದಿನಗಳ ಕಾಲ ಬಂದ್ ಆಚರಿಸಿದರು. ಆಗ ಜಮ್ಮು ವಾಣಿಜ್ಯ ಒಕ್ಕೂಟ ಹಾಗೂ ಬಿಜೆಪಿ ಕೂಡಾ ‘ದರ್ಬಾರ್ ಮೂವ್’ಗೆ ವಿರೋಧ ವ್ಯಕ್ತಪಡಿಸಿತ್ತು. ಇದೀಗ ಬಿಜೆಪಿಯು ದರ್ಬಾರ್ ಮೂವ್ ರದ್ದುಪಡಿಸುವ ಮೂಲಕ 200 ಕೋಟಿ ರೂ. ಉಳಿತಾಯ ಮಾಡುವುದಾಗಿ ಹೇಳಿಕೊಳ್ಳುತ್ತಿದೆ. ಆದರೆ ದರ್ಬಾರ್ ಚಲನೆಯ ಅವಧಿಯಲ್ಲಿ ಕಾಶ್ಮೀರಿಗಳು ಹಾಗೂ ಜಮ್ಮು ಜನರ ನಡುವೆ ಸಾವಿರಾರು ಕೋಟಿ ರೂ. ವಹಿವಾಟನ್ನು ಕೇಂದ್ರ ಸರಕಾರವು ಪರಿಗಣನೆಗೆ ತೆಗೆದುಕೊಂಡಿಲ್ಲವೆಂದು ಗುಪ್ತಾ ತಿಳಿಸಿದರು.