ಮಾನನಷ್ಟ ಪ್ರಕರಣ:ನ್ಯಾಯಾಲಯದಲ್ಲಿ ಮುಖಾಮುಖಿಯಾದ ಕಂಗನಾ ರಣಾವತ್, ಜಾವೇದ್ ಅಖ್ತರ್

photo: PTI, Twitter
ಮುಂಬೈ: ಖಾಸಗಿತನಕ್ಕೆ ಧಕ್ಕೆ ತಂದಿದ್ದಾರೆಂದು ಆರೋಪಿಸಿ ನಟಿ ಕಂಗನಾ ರಣಾವತ್ ಅವರು ಮುಂಬೈ ನ್ಯಾಯಾಲಯದಲ್ಲಿ ಸಾಹಿತಿ ಜಾವೇದ್ ಅಖ್ತರ್ ವಿರುದ್ಧ ಸೋಮವಾರ ಪ್ರತಿ ದೂರು ದಾಖಲಿಸಿದ್ದಾರೆ. ಅಖ್ತರ್ ತನ್ನನ್ನು ಬೆದರಿಸಿದ್ದಾರೆಂದೂ ಆರೋಪಿಸಿದ ಕಂಗನಾ ಅಂಧೇರಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿನ ನ್ಯಾಯಾಧೀಶರನ್ನು ನಂಬುವುದಿಲ್ಲ ಎಂದು ಹೇಳಿದರು.
ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕುರಿತು ಕಳೆದ ವರ್ಷ ಟಿವಿ ಚರ್ಚೆಯ ವೇಳೆ ಕಂಗನಾ ತನ್ನ ಹೆಸರನ್ನು ಎಳೆದುಬಂದಿದ್ದಾರೆ ಎಂದು ಆರೋಪಿಸಿ ಅಖ್ತರ್ ಅವರು ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಪ್ರತಿಕ್ರಿಯೆಯಾಗಿ ರಣಾವತ್ ಅವರು ಪ್ರತಿ-ದೂರು ನೀಡಿದರು.
ಇಂದು ಮುಂಬೈ ನ್ಯಾಯಾಲಯದಲ್ಲಿ ಕಂಗನಾ ರಣಾವತ್, ಜಾವೇದ್ ಅಖ್ತರ್ ಮುಖಾಮುಖಿಯಾದರು. ರಣಾವತ್ ತನ್ನ ಸಿಆರ್ಪಿಎಫ್ (ಕೇಂದ್ರ ಮೀಸಲು ಪೊಲೀಸ್ ಪಡೆ) ಭದ್ರತಾ ಸಿಬ್ಬಂದಿಯೊಂದಿಗೆ ನ್ಯಾಯಾಲಯಕ್ಕೆ ಬಂದರು.
ಕಂಗನಾ ರಣಾವತ್ ಅವರನ್ನು ಕಳೆದ ವಾರ ನ್ಯಾಯಾಲಯಕ್ಕೆ ಕರೆಸಲಾಗಿತ್ತು. ಆದರೆ ಅನಾರೋಗ್ಯದ ಕಾರಣದಿಂದ ದೂರ ಉಳಿದಿದ್ದರು. ಸೆಪ್ಟೆಂಬರ್ 20 ರಂದು ಮುಂದಿನ ವಿಚಾರಣೆಯ ದಿನಾಂಕಕ್ಕೆ ಹಾಜರಾಗಲು ವಿಫಲವಾದರೆ ರಣಾವತ್ ವಿರುದ್ಧ ವಾರಂಟ್ ಹೊರಡಿಸುವುದಾಗಿ ನ್ಯಾಯಾಲಯ ಕಳೆದ ವಾರ ಎಚ್ಚರಿಸಿತ್ತು.
ರಣಾವತ್ ಪ್ರಕರಣವನ್ನು ವರ್ಗಾಯಿಸಲು ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ನವೆಂಬರ್ 15 ರಂದು ಆಲಿಸಲಾಗುವುದು.
ಈ ತಿಂಗಳ ಆರಂಭದಲ್ಲಿ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ರಣಾವತ್ ಸಲ್ಲಿಸಿದ ಕೋರಿಕೆಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿತು.
ಅಖ್ತರ್ (76) ಕಳೆದ ವರ್ಷ ನವೆಂಬರ್ನಲ್ಲಿ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು, ರಣಾವತ್ ಅವರು ತಮ್ಮ ವಿರುದ್ಧ ದೂರದರ್ಶನ ಸಂದರ್ಶನವೊಂದರಲ್ಲಿ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದರು. ಇದು ತನ್ನ ಪ್ರತಿಷ್ಠೆಗೆ ಧಕ್ಕೆ ತಂದಿದೆ ಎಂದು ಆರೋಪಿಸಿದ್ದರು.