‘ಸಾಮಾನ್ಯ ವ್ಯಕ್ತಿ'ಯನ್ನು ಉನ್ನತ ಹುದ್ದೆಗೆ ಆಯ್ಕೆ ಮಾಡಿದ ಹೈಕಮಾಂಡ್ ಗೆ ಧನ್ಯವಾದ: ಚರಣ್ ಜೀತ್ ಸಿಂಗ್
ಬಡವರ ನೀರಿನ ಬಿಲ್ ಮನ್ನಾ ಘೋಷಣೆ

Source:PRO
ಚಂಡೀಗಡ: ಪಂಜಾಬ್ನ ಹೊಸ ಮುಖ್ಯಮಂತ್ರಿಯಾಗಿರುವ ಚರಣಜೀತ್ ಸಿಂಗ್ ಚನ್ನಿ ಅವರು ಇಂದು "ಆಮ್ ಆದ್ಮಿ (ಸಾಮಾನ್ಯ ವ್ಯಕ್ತಿ)" ಯನ್ನು ಉನ್ನತ ಹುದ್ದೆಗೆ ಆಯ್ಕೆ ಮಾಡಿದ್ದಕ್ಕಾಗಿ ಕಾಂಗ್ರೆಸ್ ಪಕ್ಷದ ನಾಯಕತ್ವಕ್ಕೆ ಧನ್ಯವಾದ ಸಲ್ಲಿಸಿದರು.
ಪ್ರಮಾಣವಚನ ಸ್ವೀಕರಿಸಿದ ತಕ್ಷಣವೇ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಬಡವರಿಗೆ ನೀರಿನ ಬಿಲ್ ಮನ್ನಾ ಮಾಡುವ ಪಕ್ಷದ ಮೊದಲ ಚುನಾವಣಾ ಭರವಸೆಯನ್ನು ಘೋಷಿಸಿದರು.
"ನಾನು ಆಮ್ ಆದ್ಮಿ. ಇಲ್ಲಿ ಕುಳಿತು ಇತರ ಪಕ್ಷಗಳು ಆಮ್ ಆದ್ಮಿ ಬಗ್ಗೆ ಮಾತನಾಡುತ್ತಲೇ ಇರುತ್ತವೆ. ಇದು ಆಮ್ ಆದ್ಮಿ ಸರಕಾರ. ಇದು ಪಂಜಾಬ್ಗಾಗಿ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ, ”ಎಂದು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಮತ್ತು ಉಸ್ತುವಾರಿ ಹರೀಶ್ ರಾವತ್ ಅವರ ಜೊತೆ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
" ಸಾಮಾನ್ಯ ಮನುಷ್ಯ, ರೈತ ಹಾಗೂ ತುಳಿತಕ್ಕೊಳಗಾದ ಯಾರೇ ಆಗಲಿ ನಾನು ಅವರ ಪತ್ರಿನಿಧಿಯಾಗಿದ್ಧೇನೆ. ನಾನು ಶ್ರೀಮಂತರ ಪ್ರತಿನಿಧಿಯಲ್ಲ. ಮರಳು ಗಣಿಗಾರಿಕೆ ಹಾಗೂ ಇತರ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರು ನನ್ನ ಬಳಿಗೆ ಬರುವುದಿಲ್ಲ. ನಾನು ನಿಮ್ಮ ಪ್ರತಿನಿಧಿಯಲ್ಲ ”ಎಂದು ಹೊಸ ಮುಖ್ಯಮಂತ್ರಿ ಘೋಷಿಸಿದರು.
ಬಡವರಿಗೆ ನೀರಿನ ಬಿಲ್ಗಳಿಂದ ವಿನಾಯಿತಿ ನೀಡುವುದಾಗಿ ಭರವಸೆ ನೀಡಿದ ಚನ್ನಿ, "ಕ್ಯಾಪ್ಟನ್ (ಅಮರಿಂದರ್ ಸಿಂಗ್) ಅವರ ಅಪೂರ್ಣ ಕೆಲಸವನ್ನು ನಾನು ಪೂರ್ಣಗೊಳಿಸುತ್ತೇನೆ’’ ಎಂದರು.