ಭಾರತ ಭೇಟಿಗೆ ಆಗಮಿಸಿದ್ದ ಸಿಐಎ ಅಧಿಕಾರಿಯಲ್ಲಿ 'ಹವಾನಾ ಸಿಂಡ್ರೋಮ್' ಲಕ್ಷಣ: ತನಿಖೆಗೆ ಆದೇಶಿಸಿದ ಅಮೆರಿಕ
Photo: Flickr/CC BY-SA 2.0
ಹೊಸದಿಲ್ಲಿ: ಇತ್ತೀಚೆಗೆ ಭಾರತಕ್ಕೆ ಆಗಮಿಸಿದ್ದ ಅಮೆರಿಕದ ಸಿಐಎ ನಿರ್ದೇಶಕರ ನಿಯೋಗದಲ್ಲಿದ್ದ ಅಧಿಕಾರಿಯೊಬ್ಬರಿಗೆ "ಹವಾನ ಸಿಂಡ್ರೋಮ್" ರೀತಿಯದ್ದೇ ಆದ ಲಕ್ಷಣಗಳು ಕಾಣಿಸಿಕೊಂಡಿರುವುದು ಅಮೆರಿಕಾದ ಉನ್ನತ ಭದ್ರತಾ ಅಧಿಕಾರಿಗಳಿಗೆ ಕಳವಳವುಂಟು ಮಾಡಿದೆಯಲ್ಲದೆ ಈ ಕುರಿತು ತನಿಖೆಗೂ ಆದೇಶಿಸಲಾಗಿದೆ.
ಕಳೆದೊಂದು ತಿಂಗಳ ಅವಧಿಯಲ್ಲಿ ಬೈಡೆನ್ ಆಡಳಿತದ ಉನ್ನತ ಅಧಿಕಾರಿಗಳಿಗೆ ಇಂತಹ ನಿಗೂಢ ಅನಾರೋಗ್ಯ ಬಾಧಿಸಿದ ಇದು ಎರಡನೇ ಪ್ರಕರಣವಾಗಿದೆ. ಇದಕ್ಕೂ ಮುನ್ನ ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ನಿಯೋಗದಲ್ಲಿರುವ ಅಧಿಕಾರಿಗಳಿಗೆ ಹವಾನಾ ಸಿಂಡ್ರೋಮ್ ರೀತಿಯ ಲಕ್ಷಣಗಳು ಕಾಣಿಸಿಕೊಂಡ ನಂತರ ಹ್ಯಾರಿಸ್ ಅವರ ಪ್ರವಾಸ ಕಾರ್ಯಕ್ರಮ ಮುಂದೂಡಲ್ಪಟ್ಟಿತ್ತಲ್ಲದೆ ಕನಿಷ್ಠ ಇಬ್ಬರು ಅಧಿಕಾರಿಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸುವ ಅನಿವಾರ್ಯತೆಯೂ ಎದುರಾಗಿತ್ತು.
ಕ್ಯುಬಾದ ರಾಜಧಾನಿ ಹವಾನಾದಲ್ಲಿರುವ ಅಮೆರಿಕಾ ದೂತಾವಾಸದಲ್ಲಿ ಸೇವೆ ಸಲ್ಲಿಸುತ್ತಿದ್ದ ಅಧಿಕಾರಿಗಳಲ್ಲಿ ಮೊದಲ ಬಾರಿಗೆ ಇಂತಹ ಲಕ್ಷಣಗಳು 2016ರಲ್ಲಿ ಕಾಣಿಸಿಕೊಂಡ ನಂತರ ಅದನ್ನು ಹವಾನಾ ಸಿಂಡ್ರೋಮ್ ಎನ್ನಲಾಗುತ್ತಿದೆ. ಪ್ರಮುಖವಾಗಿ ಅಮೆರಿಕಾದ ಉನ್ನತ ಏಜನ್ಸಿಗಳಿಗೆ ಕೆಲಸ ಮಾಡುವ ಗೂಢಚರರು ಈ ದಾಳಿಗೆ ಒಳಗಾಗಿದ್ದು ಅಮೆರಿಕಾದಲ್ಲಿ ಪ್ರಸಕ್ತ ಹವಾನಾ ಸಿಂಡ್ರೋಮ್ನ 300 ಸಕ್ರಿಯ ಪ್ರಕರಣಗಳಿವೆ. ಈ ಸಿಂಡ್ರೋಮ್ಗೊಳಗಾದವರು ವಾಕರಿಕೆ ಅನುಭವ, ಶ್ರವಣ ದೋಷ, ವಿಚಿತ್ರ ಸದ್ದುಗಳನ್ನು ಕೇಳುವುದು, ಸ್ಮರಣೆ ನಾಶ, ತಲೆ ಸುತ್ತುವುದು ಮುಂತಾದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ.
ಭಾರತಕ್ಕೆ ಭೇಟಿ ನೀಡಿದ ನಿಯೋಗದಲ್ಲಿದ್ದ ಅಧಿಕಾರಿಗೂ ಈ ಸಮಸ್ಯೆ ಕಾಣಿಸಿಕೊಂಡ ನಂತರ ಸಿಐಎ ನಿರ್ದೇಶಕರು ತನಿಖೆಗೆ ಆದೇಶಿಸಿದ್ದಾರಲ್ಲದೆ ರಾಷ್ಟ್ರೀಯ ಗುಪ್ತಚರ ಏಜನ್ಸಿಯ ನಿರ್ದೇಶಕರಾದ ಆವ್ರಿಲ್ ಹೈನೆಸ್ ಅವರಿಗೆ 100 ದಿನಗಳೊಳಗೆ ತನಿಖೆ ಮುಗಿಸುವಂತೆ ಸೂಚಿಸಲಾಗಿದೆ.
ವೈರಿ ದೇಶಗಳ ಗುಪ್ತಚರ ಏಜನ್ಸಿಗಳು ಈ ಸಮಸ್ಯೆಯ ಹಿಂದಿದೆ ಎಂದು ಅಮೆರಿಕಾದ ಅಧಿಕಾರಿಗಳು ಹೇಳುತ್ತಿದ್ದಾರಾದರೂ ಅದಕ್ಕೆ ಪುಷ್ಠಿ ನೀಡುವಂತಹ ಆಧಾರಗಳು ಇನ್ನಷ್ಟೇ ಲಭಿಸಬೇಕಿದೆ. ಈ ಹಿನ್ನೆಲೆಯಲ್ಲಿ ಅಮೆರಿಕಾ ಆಡಳಿತ ತನ್ನ ಉನ್ನತ ಅಧಿಕಾರಿಗಳಿಗೆ ಗರಿಷ್ಠ ಮುಂಜಾಗರೂಕತೆ ಮತ್ತು ಎಚ್ಚರಿಕೆಯಿಂದಿರುವಂತೆ ಸೂಚಿಸಿದೆ.