ಕೋವಿಶೀಲ್ಡ್ ಗೆ ಮಾನ್ಯತೆ ನೀಡದ ಇಂಗ್ಲೆಂಡ್ ಸರ್ಕಾರದ ಕ್ರಮ ತಾರತಮ್ಯಕಾರಿ ಎಂದ ವಿದೇಶಾಂಗ ಕಾರ್ಯದರ್ಶಿ
ಹೊಸದಿಲ್ಲಿ: ಕೋವಿಶೀಲ್ಡ್ ಲಸಿಕೆಯನ್ನು ಮಾನ್ಯ ಮಾಡದೇ ಇರುವ ಬ್ರಿಟಿಷ್ ಸರ್ಕಾರದ ನಿರ್ಧಾರ ತಾರತಮ್ಯಕಾರಿ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷ್ ವರ್ಧನ್ ಶ್ರಿಂಗ್ಲಾ ಹೇಳಿದ್ದಾರಲ್ಲದೆ ಅಲ್ಲಿನ ಸರ್ಕಾರದ ನಿರ್ಧಾರವು ಇಂಗ್ಲೆಂಡ್‍ಗೆ ಪ್ರಯಾಣಿಸುವ ಭಾರತೀಯ ನಾಗರಿಕರ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದಿದ್ದಾರೆ.
ಬ್ರಿಟಿಷ್ ಸರ್ಕಾರದ ಹೊಸ ಪ್ರಯಾಣ ನಿಯಮಗಳನ್ವಯ ಭಾರತ, ಥೈಲ್ಯಾಂಡ್, ರಷ್ಯಾ, ಟರ್ಕಿ ಜೋರ್ಡನ್, ಯುಎಇ, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾದಲ್ಲಿ ಕೋವಿಡ್ ಲಸಿಕೆ ಪಡೆದವರನ್ನು ಲಸಿಕೆ ಪಡೆಯದವರು ಎಂದು ಪರಿಗಣಿಸಲಾಗುವುದು. ಈ ದೇಶಗಳ ಪ್ರಯಾಣಿಕರು ಇಂಗ್ಲೆಂಡ್ ತಲುಪಿದ ನಂತರ 10 ದಿನಗಳ ಕ್ವಾರಂಟೈನಿಗೊಳಗಾಗಬೇಕಿದ್ದು ಈ ಹೊಸ ನಿಯಮ ಅಕ್ಟೋಬರ್ 4ರಿಂದ ಜಾರಿಗೊಳ್ಳಲಿದೆ.
"ಸಮಸ್ಯೆ ಇತ್ಯರ್ಥಗೊಳ್ಳುವ ತನಕ ಅದಕ್ಕೆ ತಕ್ಕ ಪ್ರತಿಕ್ರಮ ಕೈಗೊಳ್ಳುವ ಹಕ್ಕು ಭಾರತಕ್ಕಿದೆ, ಈ ವಿಚಾರವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಸ್ತಾಪಿಸಿ ತನ್ನ ಆಕ್ಷೇಪವನ್ನು ಇಂಗ್ಲೆಂಡಿನ ವಿದೇಶಾಂಗ ಕಾರ್ಯದರ್ಶಿಗೆ ಸೂಚಿಸಿದೆ. ಸಮಸ್ಯೆ ಇತ್ಯರ್ಥಪಡಿಸುವ ಭರವಸೆ ನೀಡಲಾಗಿದೆ ಎಂಬ ಮಾಹಿತಿಯಿದೆ" ಎಂದರು.
ತಾವು ಈ ವಿಚಾರವನ್ನು ಇಂಗ್ಲೆಂಡ್‍ನ ವಿದೇಶಾಂಗ ಕಾರ್ಯದರ್ಶಿ ಲಿಝ್ ಟ್ರಸ್ಸ್ ಅವರೊಂದಿಗೆ ಪ್ರಸ್ತಾಪಿಸಿದ್ದಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ತಿಳಿಸಿದ್ದಾರೆ.