ಐಪಿಎಲ್:ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ 185 ರನ್ ಗೆ ಆಲೌಟ್
ಅರ್ಷದೀಪ್ ಸಿಂಗ್ ಗೆ ಐದು ವಿಕೆಟ್ ಗೊಂಚಲು

photo: twitter
ದುಬೈ, ಸೆ.21: ಆರಂಭಿಕ ಬ್ಯಾಟ್ಸ್ ಮನ್ ಗಳಾದ ಎವಿನ್ ಲೆವಿಸ್ ಹಾಗೂ ಯಶಸ್ವಿ ಜೈಸ್ವಾಲ್ ಅವರು ಒದಗಿಸಿದ ಉತ್ತಮ ಆರಂಭದ ಹೊರತಾಗಿಯೂ ರಾಜಸ್ಥಾನ ರಾಯಲ್ಸ್ ತಂಡ ಮಂಗಳವಾರ ನಡೆದ ಐಪಿಎಲ್ ಟೂರ್ನಿಯ 32ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 185 ರನ್ ಗೆ ಆಲೌಟಾಗಿದೆ.
ಟಾಸ್ ಜಯಿಸಿದ ಪಂಜಾಬ್ ಕಿಂಗ್ಸ್ ನಾಯಕ ಕೆ.ಎಲ್.ರಾಹುಲ್ ರಾಜಸ್ಥಾನ ರಾಯಲ್ಸ್ ತಂಡವನ್ನು ಬ್ಯಾಟಿಂಗ್ ಗೆ ಇಳಿಸಿದರು. ರಾಜಸ್ಥಾನ ತಂಡವು ನಿಗದಿತ 20 ಓವರ್ ಗಳಲ್ಲಿ 185 ರನ್ ಗಳಿಸಿ ಆಲೌಟಾಯಿತು. ಅರ್ಷದೀಪ್ ಸಿಂಗ್(5-32) ಐದು ವಿಕೆಟ್ ಗೊಂಚಲನ್ನು ಪಡೆದರು. ಮುಹಮ್ಮದ್ ಶಮಿ(3-21)ಮೂರು ವಿಕೆಟ್ ಪಡೆದು ಮಿಂಚಿದರು.
ಇನಿಂಗ್ಸ್ ಆರಂಭಿಸಿದ ಲೆವಿಸ್ (36 ರನ್, 21 ಎಸೆತ, 7 ಬೌಂಡರಿ, 1 ಸಿಕ್ಸರ್)ಹಾಗೂ ಜೈಸ್ವಾಲ್(49 ರನ್, 36 ಎಸೆತ, 6 ಬೌಂಡರಿ, 2 ಸಿ.)ಮೊದಲ ವಿಕೆಟ್ ಗೆ 5.3 ಓವರ್ ಗಳಲ್ಲಿ 54 ರನ್ ಜೊತೆಯಾಟ ನಡೆಸಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಆ ಬಳಿಕ ಕ್ರೀಸಿಗಿಳಿದ ನಾಯಕ ಸಂಜು ಸ್ಯಾಮ್ಸನ್(4), ರಿಯಾನ್ ಪರಾಗ್(4), ರಾಹುಲ್ ಟೆವಾಟಿಯಾ(2) ಹಾಗೂ ಕ್ರಿಸ್ ಮೊರಿಸ್(5) ದೊಡ್ಡ ಮೊತ್ತ ಗಳಿಸಲು ವಿಫಲರಾದರು. ಮಧ್ಯಮ ಕ್ರಮಾಂಕದಲ್ಲಿ ಮಹಿಪಾಲ್(43 ರನ್,17 ಎಸೆತ, 2 ಬೌಂಡರಿ, 4 ಸಿಕ್ಸರ್)ಹಾಗೂ ಲಿಯಾಮ್ ಲಿವಿಂಗ್ ಸ್ಟೋನ್(25, 17 ಎಸೆತ) ತಂಡವನ್ನು ಆಧರಿಸಿದರು.