ಮಯಾಂಕ್-ರಾಹುಲ್ ಭರ್ಜರಿ ಜೊತೆಯಾಟ ವ್ಯರ್ಥ, ರಾಜಸ್ಥಾನ ವಿರುದ್ಧ ಪಂಜಾಬ್ ಗೆ ಸೋಲು
ಕೊನೆಯ ಓವರ್ ನಲ್ಲಿ ಪಂದ್ಯ ಗೆಲ್ಲಿಸಿಕೊಟ್ಟ ಕಾರ್ತಿಕ್ ತ್ಯಾಗಿ ಪಂದ್ಯಶ್ರೇಷ್ಠ

photo: twitter.com/WisdenCricket
ದುಬೈ, ಸೆ.21: ಕನ್ನಡಿಗರಾದ ಮಯಾಂಕ್ ಅಗರ್ವಾಲ್ ಹಾಗೂ ಕೆ.ಎಲ್ .ರಾಹುಲ್ ಭರ್ಜರಿ ಜೊತೆಯಾಟದ ಹೊರತಾಗಿಯೂ ಪಂಜಾಬ್ ಕಿಂಗ್ಸ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧದ ಐಪಿಎಲ್ ನ 32ನೇ ಪಂದ್ಯದಲ್ಲಿ ಕೇವಲ 2 ರನ್ ನಿಂದ ಆಘಾತಕಾರಿ ಸೋಲನುಭವಿಸಿದೆ.
ಗೆಲ್ಲಲು 186 ರನ್ ಗುರಿ ಬೆನ್ನಟ್ಟಿದ್ದ ಪಂಜಾಬ್ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಕೊನೆಯ ಓವರ್ ನಲ್ಲಿ ಪಂಜಾಬ್ ಗೆಲುವಿಗೆ 4 ರನ್ ಅಗತ್ಯವಿತ್ತು. ಕೊನೆಯ ಓವರ್ ಬೌಲಿಂಗ್ ಮಾಡಿದ್ದ ಕಾರ್ತಿಕ್ ತ್ಯಾಗಿ ಎರಡು ವಿಕೆಟ್ ಗಳನ್ನು (2-29) ಕಬಳಿಸಿ ರಾಜಸ್ಥಾನಕ್ಕೆ ರೋಚಕ ಜಯ ತಂದುಕೊಟ್ಟರು. ಈ ಸಾಹಸಕ್ಕೆ ಕಾರ್ತಿಕ್ ಪಂದ್ಯಶ್ರೇಷ್ಟ ಗೌರವ ಪಡೆದರು.
ಇನಿಂಗ್ಸ್ ಆರಂಭಿಸಿದ ಮಯಾಂಕ್ ಹಾಗೂ ರಾಹುಲ್ ಮೊದಲ ವಿಕೆಟ್ ಜೊತೆಯಾಟದಲ್ಲಿ 11.5 ಓವರ್ ಗಳಲ್ಲಿ 120 ರನ್ ಸೇರಿಸಿ ಭರ್ಜರಿ ಆರಂಭ ಒದಗಿಸಿದರು. ಲೋಕೇಶ್ ರಾಹುಲ್(49, 33 ಎಸೆತ, 4 ಬೌಂಡರಿ, 2 ಸಿಕ್ಸರ್)ಕೇವಲ 1 ರನ್ ನಿಂದ ಅರ್ಧಶತಕ ವಂಚಿತರಾಗಿ ಚೇತನ್ ಸಕಾರಿಯಾಗೆ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಮೊದಲ ವಿಕೆಟ್ ಜೊತೆಯಾಟಕ್ಕೆ ಬ್ರೇಕ್ ಬಿತ್ತು.
ಮೊರಿಸ್ ಬೌಲಿಂಗ್ ನಲ್ಲಿ ಸಿಕ್ಸರ್ ಅನ್ನು ಸಿಡಿಸುವ ಮೂಲಕ ಮಯಾಂಕ್ ಕೇವಲ 34 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಐಪಿಎಲ್ ನಲ್ಲಿ 2,000 ರನ್ ಪೂರೈಸಿದ ಮಯಾಂಕ್(67, 43 ಎಸೆತ, 7 ಬೌಂಡರಿ, 2 ಸಿಕ್ಸರ್)ಅಬ್ಬರಕ್ಕೆ ರಾಹುಲ್ ಟೇವಾಟಿಯ ತೆರೆ ಎಳೆದರು.
ರಾಹುಲ್-ಮಯಾಂಕ್ ಔಟಾದ ಬಳಿಕ ಮರ್ಕರಮ್(ಔಟಾಗದೆ 26) ಹಾಗೂ ನಿಕೊಲಸ್ ಪೂರನ್(32)3ನೇ ವಿಕೆಟ್ ಜೊತೆಯಾಟದಲ್ಲಿ 57 ರನ್ ಸೇರಿಸಿದರು.ಆದಾಗ್ಯೂ ಪಂಜಾಬ್ ಗೆ ಗೆಲುವು ದಕ್ಕಲಿಲ್ಲ