ದಿಲ್ಲಿ: ಕಿರ್ಗಿಸ್ತಾನ್‌ನ ಗರ್ಭಿಣಿ ಮಹಿಳೆ, ಆಕೆಯ ಪುತ್ರ ಕೊಲೆಯಾದ ಸ್ಥಿತಿಯಲ್ಲಿ ಪತ್ತೆ; ಪೊಲೀಸರು

ಹೊಸದಿಲ್ಲಿ: ಆಗ್ನೇಯ ದಿಲ್ಲಿಯ ಕಲ್ಕಾಜಿ ಪ್ರದೇಶದಲ್ಲಿರುವ ಸ್ನೇಹಿತನ ಮನೆಯಲ್ಲಿ ಮಂಗಳವಾರ ಬೆಳಗ್ಗೆ ಕಿರ್ಗಿಸ್ತಾನ್‌ನ ಗರ್ಭಿಣಿ ಮಹಿಳೆ ಹಾಗೂ ಆಕೆಯ ಒಂದು ವರ್ಷದ ಪುತ್ರ ಕೊಲೆಯಾದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಯ್ಸ್ಕಲ್ ಝುಮಾಬೈವಾ (28 ವರ್ಷ) ಹಾಗೂ ಆಕೆಯ ಪುತ್ರ ಮಾನಸ್ ಹಾಸಿಗೆಯ ಮೇಲೆ ಎದೆ ಮತ್ತು ದೇಹದ ಇತರ ಭಾಗಗಳಿಗೆ ಇರಿತದ ಗಾಯಗಳೊಂದಿಗೆ ಶವವಾಗಿ ಪತ್ತೆಯಾಗಿದ್ದಾರೆ ಎಂದು ಅವರು ಹೇಳಿದರು.
ಮಹಿಳೆ ಐದು ತಿಂಗಳ ಗರ್ಭಿಣಿಯಾಗಿದ್ದು ಗೃಹಿಣಿಯಾಗಿದ್ದರು. ಪತಿ ವಿನಯ್ ಚೌಹಾಣ್ ಜೊತೆ ಗ್ರೇಟರ್ ಕೈಲಾಶ್ ನಲ್ಲಿ ವಾಸಿಸುತ್ತಿದ್ದರು. ವಿನಯ್ ಚೌಹಾಣ್ ಅತಿಥಿ ಗೃಹಗಳನ್ನು ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ದಂಪತಿಗಳು 3 ವರ್ಷಗಳ ಹಿಂದೆ ವಿವಾಹವಾಗಿದ್ದಾರೆ ಹಾಗೂ ಅವರಿಗೆ 13 ತಿಂಗಳ ಪುತ್ರನಿದ್ದ. ಈ ಮಗು ತಾಯಿಯ ಜೊತೆಯಲ್ಲಿ ಶವವಾಗಿ ಪತ್ತೆಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಘಟನೆ ನಡೆದಾಗ ಮಹಿಳೆ ಹಾಗೂ ಆಕೆಯ ಪುತ್ರ ಕಲ್ಕಾಜಿಯಲ್ಲಿರುವ ಆಕೆಯ ಸ್ನೇಹಿತನ ಮನೆಯಲ್ಲಿ ಇದ್ದರು. ಮಹಿಳೆಯ ಪತಿ ವಿನಯ್ ಚೌಹಾಣ್ ತನ್ನ ಸ್ನೇಹಿತರ ಮೂಲಕ ಘಟನೆಯ ಮಾಹಿತಿ ಸಿಕ್ಕ ಬಳಿಕ ಪಿಸಿಆರ್ ಕರೆ ಮಾಡಿದ್ದಾರೆ ಅಧಿಕಾರಿ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ. ಅಪರಾಧಿಯನ್ನು ಹಿಡಿಯಲು ಹಾಗೂ ಹತ್ಯೆಯ ಹಿಂದಿನ ಉದ್ದೇಶವನ್ನು ಪತ್ತೆಹಚ್ಚಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.