ರಮಣ್ ಸಿಂಗ್, ಸಂಬಿತ್ ಪಾತ್ರಾ ತನಿಖೆಗೆ ತಡೆ ವಿರುದ್ಧ ಛತ್ತೀಸ್‌ಗಡ ಸರಕಾರದ ಮನವಿ ವಜಾಗೊಳಿಸಿದ ಸುಪ್ರೀಂ
ಟೂಲ್‌ಕಿಟ್ ಪ್ರಕರಣ

ಹೊಸದಿಲ್ಲಿ: ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಹಾಗೂ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರ ವಿರುದ್ಧದ ಎಫ್ಐಆರ್ ತನಿಖೆಯನ್ನು ತಡೆಹಿಡಿದಿರುವ ರಾಜ್ಯ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಛತ್ತೀಸ್‌ಗಡ ಸರಕಾರ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಜಾಗೊಳಿಸಿದೆ.
ನ್ಯಾಯಮೂರ್ತಿ ಬಿ.ಆರ್. ಗವಾಯಿ ಹಾಗೂ ಹಿಮಾ ಕೊಹ್ಲಿ ಅವರ ಪೀಠವು ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿತು ಹಾಗೂ ಈ ವಿಷಯವನ್ನು ತ್ವರಿತವಾಗಿ ತೀರ್ಮಾನಿಸುವಂತೆ ಹೈಕೋರ್ಟ್‌ಗೆ ತಿಳಿಸಿತು.
ದೇಶ ‘ಮಾನಹಾನಿ’ ಮಾಡುವ ಉದ್ದೇಶದಿಂದ ಕಾಂಗ್ರೆಸ್ ಟೂಲ್‌ಕಿಟ್ ನ್ನು ರಚಿಸಿತ್ತು ಎಂದು ಸಿಂಗ್ ಹಾಗೂ ಪಾತ್ರಾ ತಮ್ಮ ಟ್ವೀಟ್‌ಗಳ ಮೂಲಕ ಆರೋಪ ಹೊರಿಸಿದ ಒಂದು ದಿನದ ನಂತರ ಎನ್ಎಸ್‌ಯುಐನ ಛತ್ತೀಸ್‌ಗಡದ ಅಧ್ಯಕ್ಷ ಆಕಾಶ್ ಶರ್ಮಾ ದೂರು ಸಲ್ಲಿಸಿದ ನಂತರ ಸಿಂಗ್ ಹಾಗೂ ಪಾತ್ರಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.
ಬಿಜೆಪಿ ನಾಯಕರು ಅಶಾಂತಿಯನ್ನು ಹರಡಿದ್ದಾರೆ ಹಾಗೂ ಕಟ್ಟು ಕಥೆಯ ಮೂಲಕ ಜನರನ್ನು ಪ್ರಚೋದಿಸಿದ್ದಾರೆ ಎಂದು ಕಾಂಗ್ರೆಸ್ ದೂರಿ ನಲ್ಲಿ ಆರೋಪಿಸಿತ್ತು.
ಬಿಜೆಪಿ ನಾಯಕರ ಮನವಿಯನ್ನು ಆಲಿಸಿದ್ದ ಹೈಕೋರ್ಟ್ ಜೂನ್ 11 ರಂದು ತನಿಖೆಯನ್ನು ತಡೆಹಿಡಿಯಿತು.