‘ಗ್ರಾಮ ಸಡಕ್’ ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರಕ್ಕೆ ಬಂಡೆಪ್ಪ ಕಾಶೆಂಪುರ್ ಒತ್ತಾಯ

ಬೆಂಗಳೂರು, ಸೆ. 23: ‘ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಮೂರನೆ ಹಂತದ ರಸ್ತೆ ನಿರ್ಮಾಣದ ವೇಳೆಯಲ್ಲಿ ರೈತರ ಜಮೀನುಗಳನ್ನು ಆಕ್ರಮಣ ಮಾಡಿಕೊಂಡು ರಸ್ತೆ ನಿರ್ಮಾಣ ಮಾಡಲಾಗುತ್ತಿದ್ದು, ಭೂಮಿ ಕಳೆದುಕೊಂಡ ರೈತರಿಗೆ ಕೇಂದ್ರ, ರಾಜ್ಯ ಸರಕಾರ ಪರಿಹಾರ ನೀಡಬೇಕು' ಎಂದು ಜೆಡಿಎಸ್ ಉಪನಾಯಕ ಬಂಡೆಪ್ಪ ಕಾಶೆಂಪುರ್ ಒತ್ತಾಯಿಸಿದ್ದಾರೆ.
ಗುರುವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ‘ಬೀದರ್ ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂರನೇ ಹಂತದ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ನಾವು ಚಾಲನೆ ನೀಡಿದ್ದೇವೆ. ಆದರೆ, ರೈತರ ಹೆಚ್ಚುವರಿ ಜಮೀನುಗಳನ್ನು ರಸ್ತೆ ನಿರ್ಮಾಣದ ವೇಳೆ ಆಕ್ರಮಣ ಮಾಡಿಕೊಂಡು ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಗಮನ ಸೆಳೆದರು.
‘ಸರಕಾರದ ಈ ಕ್ರಮದ ಬಗ್ಗೆ ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮೀಣ ಭಾಗದ ರಸ್ತೆ ನಿರ್ಮಾಣದ ವೇಳೆಯಲ್ಲಿ 20 ರಿಂದ 33 ಅಡಿಗಳಷ್ಟು ಸ್ಥಳದಲ್ಲಿ ರಸ್ತೆ ನಿರ್ಮಾಣ ಮಾಡಬೇಕು. ಆದರೆ, ಆ ಕಡೆ 10 ಅಡಿ ಮತ್ತು ಈ ಕಡೆ 10 ಅಡಿಯಷ್ಟು ಅಗಲಿಕರಣ ಮಾಡಿ 50 ಅಡಿಗಳಷ್ಟು ರೈತರ ಜಮೀನು ಹೋಗುತ್ತಿದೆ. ಹೀಗಾಗಿ ಗ್ರಾಮ ಸಡಕ್ ಯೋಜನೆಯ ಬಗ್ಗೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಸರಕಾರದ ಪರವಾಗಿ ಉತ್ತರ ನೀಡಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ‘ಸಾಮಾನ್ಯವಾಗಿ ರಸ್ತೆ ವಿಸ್ತರಣೆಗೆ ಭೂ ಸ್ವಾಧೀನಪಡಿಸಿಕೊಳ್ಳುವ ಸಂದರ್ಭದಲ್ಲಿ ರೈತರಿಗೆ ಪರಿಹಾರ ನೀಡಲಾಗುತ್ತದೆ. ಒಂದು ವೇಳೆ ಸದಸ್ಯರು ಹೇಳಿದ ವಿಚಾರದ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು' ಎಂದು ತಿಳಿಸಿದರು.







