ಬೆಂಗಳೂರು ರಾತ್ರಿ ರೈಲು ವೇಳಾಪಟ್ಟಿ ಪರಿಷ್ಕರಣೆ

ಮಂಗಳೂರು: ಕಣ್ಣೂರು- ಮಂಗಳೂರು ಸೆಂಟ್ರಲ್- ಬೆಂಗಳೂರು ಎಕ್ಸ್‌ಪ್ರೆಸ್ ಸ್ಪೆಷಲ್ ರೈಲು (06516) ರಾತ್ರಿ ಮಂಗಳೂರು ಸೆಂಟ್ರಲ್ ನಿಂದ ಬೆಂಗಳೂರು ಕಡೆಗೆ ಹೊರಡುವ ಸಮಯ ಪರಿಷ್ಕರಣೆಗೊಂಡಿದೆ.
ಈ ರೈಲು ಹಳೇ ವೇಳಾಪಟ್ಟಿ 8 ಗಂಟೆ ಬದಲಾಗಿ 8.10 ಕ್ಕೆ ಬೆಂಗಳೂರಿಗೆ ಹೊರಡುವ ಸಮಯ ನಿಗದಿಪಡಿಸಿ ನೈರುತ್ಯ ರೈಲ್ವೆ ಬುಧವಾರ ಅಧಿಸೂಚನೆ ಹೊರಡಿಸಿದೆ.
ಹಿಂದೆ ಕಣ್ಣೂರು ಮತ್ತು ಕಾರವಾರ ರೈಲು ಮಂಗಳೂರು ನಿಲ್ದಾಣದಿಂದ ಜೊತೆಯಾಗಿ ಬೆಂಗಳೂರು ಕಡೆಗೆ ಸಂಚರಿಸುತ್ತಿದ್ದ ದಿನಗಳಲ್ಲಿ ಈ ರೈಲು ರಾತ್ರಿ 8.55 ಕ್ಕೆ ಮಂಗಳೂರಿನಿಂದ ಹೊರಡುತ್ತಿತ್ತು. ಬಳಿಕ ಕಾರವಾರ ರೈಲು ಮಂಗಳೂರು ನಗರ ಪ್ರವೇಶಿಸದೆ ಪಡೀಲು ಮಾರ್ಗ ಪ್ರಯಾಣಿಸಲು ಆರಂಭಿಸಿದ ಬಳಿಕ ಕಣ್ಣೂರು ರೈಲು ಮಂಗಳೂರು ಸೆಂಟ್ರಲ್‌ನಿಂದ ಹೊರಡುವ ಸಮಯ 8.10 ಕ್ಕೆ ಪರಿಷ್ಕರಿಸಲಾಯಿತು. ಕಳೆದ ಏಪ್ರಿಲ್‌ನಿಂದ ಮತ್ತೆ 10 ನಿಮಿಷ ಮುಂಚಿತವಾಗಿ 8 ಗಂಟೆಗೆ ಈ ರೈಲು ಮಂಗಳೂರಿನಿಂದ ಹೊರಡುವಂತೆ ರೈಲ್ವೆ ವೇಳಾಪಟ್ಟಿಯನ್ನು ಪರಿಷ್ಕರಿಸಿತ್ತು.
ರಾತ್ರಿ ರೈಲು ಮಂಗಳೂರಿನಿಂದ ತುಂಬಾ ಬೇಗ ಹೊರಡುವುದರಿಂದ ನಿತ್ಯ ಪ್ರಯಾಣಿಕರಿಗೆ ತುಂಬಾ ಸಮಸ್ಯೆಯಾಗುತ್ತದೆ. ಮುಖ್ಯವಾಗಿ ಈ ಭಾಗದ ವ್ಯಾಪಾರಿಗಳು, ಸಂಜೆ ಕಾಲೇಜು ವಿದ್ಯಾರ್ಥಿಗಳು, ಖಾಸಗಿ ವಲಯದ ನೌಕರರು, ನಗರದ ಆಸ್ಪತ್ರೆ, ವಿವಿಧ ಮಳಿಗೆಗಳಲ್ಲಿ ದುಡಿಯುವ ನೌಕರರಿಗೆ ತುಂಬಾ ಸಮಸ್ಯೆಯಾಗುತ್ತದೆ. ಆದ್ದರಿಂದ ಈ ರಾತ್ರಿ ರೈಲು ಸಮಯವನ್ನು ಹಳೇ ವೇಳಾಪಟ್ಟಿಯಲ್ಲೇ ಓಡಿಸುವಂತೆ ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹನುಮಂತ ಕಾಮತ್ ಅವರು ನೈರುತ್ಯ ರೈಲ್ವೆ ಚೀಫ್ ಪ್ಯಾಸೆಂಜರ್ ಟ್ರಾನ್ಸ್‌ಪೋರ್ಟೇಶನ್ ಮ್ಯಾನೇಜರ್ ಅವರಿಗೆ ಕಳೆದ ಏಪ್ರಿಲ್ ನಲ್ಲಿಯೇ ಮನವಿ ಸಲ್ಲಿಸಿದ್ದರು. ಇದಲ್ಲದೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ವಿವಿಧ ವೇದಿಕೆಗಳ ಮೂಲಕವೂ ಒತ್ತಡ ಹಾಕಲಾಗಿತ್ತು.
ಸಮಿತಿಯ ಬೇಡಿಕೆಗೆ ನೈರುತ್ಯ ರೈಲ್ವೆಯಿಂದ ಒಂದು ಹಂತದ ಸ್ಪಂದನೆ ದೊರೆತಿದೆ. ಪ್ರಯಾಣಿಕರ ಅನುಕೂಲದ ದೃಷ್ಟಿಯಿಂದ ಹಂತಹಂತವಾಗಿ ಈ ರೈಲು ಮಂಗಳೂರಿನಿಂದ ಆರಂಭದಲ್ಲಿ ಇದ್ದಂತೆ ರಾತ್ರಿ 8.55 ಕ್ಕೆ ಹೊರಡಿಸಲು ಸಮಿತಿ ಪ್ರಯತ್ನಿಸಲಿದೆ ಎಂದು ಸಮಿತಿ ತಾಂತ್ರಿಕ ಸಲಹೆಗಾರ ಅನಿಲ್ ಹೆಗ್ಡೆ ತಿಳಿಸಿದ್ದಾರೆ.







