ಕೃಷಿತ್ಯಾಜ್ಯ ಸುಡುವುದನ್ನು ತಡೆಯಲು ದಿಲ್ಲಿ, ನೆರೆಯ ರಾಜ್ಯಗಳಿಗೆ ಮಾರ್ಗಸೂಚಿ ಬಿಡುಗಡೆ
ಹೊಸದಿಲ್ಲಿ, ಸೆ.23: ಚಳಿಗಾಲದಲ್ಲಿ ರೈತರು ತಮ್ಮ ಹೊಲಗಳಲ್ಲಿ ಕೃಷಿತ್ಯಾಜ್ಯಗಳನ್ನು ಸುಡುವುದನ್ನು ತಡೆಯಲು ಬಯೊ-ಡಿಕಂಪೋಸರ್ ಬಳಕೆ ಸೇರಿದಂತೆ ಕಟ್ಟುನಿಟ್ಟಿನ ಕ್ರಿಯಾ ಯೋಜನೆಯನ್ನು ಜಾರಿಗೊಳಿಸುವಂತೆ ವಾಯು ಗುಣಮಟ್ಟ ನಿರ್ವಹಣೆ ಆಯೋಗವು ದಿಲ್ಲಿ ಮತ್ತು ನೆರೆಯ ರಾಜ್ಯಗಳ ಸರಕಾರಗಳಿಗೆ ನಿರ್ದೇಶ ನೀಡಿದೆ.
ತಮ್ಮ ಹೊಲಗಳನ್ನು ಗೋದಿಯಂತಹ ಇತರ ಬೆಳೆಗಳ ಬಿತ್ತನೆಗೆ ಸಿದ್ಧಗೊಳಿಸಲು ಪಂಜಾಬ,ಹರ್ಯಾಣ ಮತ್ತು ಉತ್ತರ ಪ್ರದೇಶಗಳ ರೈತರು ಭತ್ತದ ಕೊಯ್ಲಿನ ಬಳಿಕ ವೆಚ್ಚವನ್ನು ತಗ್ಗಿಸುವ ಮತ್ತು ಸಮಯ ಉಳಿಸುವ ಉದ್ದೇಶದಿಂದ ಕೃಷಿತ್ಯಾಜ್ಯವನ್ನು ಸುಡುತ್ತಾರೆ. ಇದು ಉತ್ತರ ಭಾರತದ ಹೆಚ್ಚಿನ ಪ್ರದೇಶಗಳಲ್ಲಿ ವಾಯುಮಾಲಿನ್ಯ ಹೆಚ್ಚಲು ಕಾರಣವಾಗುತ್ತಿದೆ.
ಉ.ಪ್ರದೇಶದ ಆರು ಲಕ್ಷ, ಹರ್ಯಾಣದ ಒಂದು ಲಕ್ಷ,ಪಂಜಾಬಿನ 7,413 ಮತ್ತು ದಿಲ್ಲಿಯ
4,000 ಎಕರೆ ಕೃಷಿಭೂಮಿಯಲ್ಲಿ ಪುಸಾ ಬಯೊ-ಡಿಕಂಪೋಸರ್ ಬಳಸಲು ಯೋಜಿಸಲಾಗಿದೆ ಎಂದು ತನಗೆ ಮಾಹಿತಿ ನೀಡಲಾಗಿದೆ ಎಂದು ಆಯೋಗವು ಹೇಳಿಕೆಯಲ್ಲಿ ತಿಳಿಸಿದೆ.
ಬಯೊ-ಕಂಪೋಸರ್ ಏಳು ಜಾತಿಗಳ ಶಿಲೀಂಧ್ರಗಳನ್ನೊಳಗೊಂಡ ದ್ರಾವಣವಾಗಿದ್ದು, ಇದನ್ನು ದಿಲ್ಲಿಯ ಪುಸಾದಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಅಭಿವೃದ್ಧಿಗೊಳಿಸಿದ್ದಾರೆ. ಇದು ಕೃಷಿ ತ್ಯಾಜ್ಯವನ್ನು ವಿಭಜನೆಗೆ ಒಳಪಡಿಸುತ್ತದೆ,ಹೀಗಾಗಿ ಅದನ್ನು ಸುಡುವ ಅಗತ್ಯವಿಲ್ಲ. ಅಲ್ಲದೆ ದೀರ್ಘಾವಧಿಯಲ್ಲಿ ಹೊಲದ ಮಣ್ಣು ಸಹ ಸಾರಯುತಗೊಳ್ಳುತ್ತದೆ. 2019ರಲ್ಲಿ ಪ್ರಾಯೋಗಿಕ ನೆಲೆಯಲ್ಲಿ ಈ ಬಯೊ-ಡಿಕಂಪೋಸರ್ನ್ ರೈತರಿಗೆ ಒದಗಿಸಲಾಗಿತ್ತು.
ಭತ್ತದ ಹುಲ್ಲಿನ ಉತ್ಪಾದನೆಯನ್ನು ಕಡಿಮೆಗೊಳಿಸುವ ಯೋಜನೆಗಳತ್ತವೂ ಗಮನ ಹರಿಸುವಂತೆ ಆಯೋಗವು ಈ ರಾಜ್ಯಗಳಿಗೆ ಸೂಚಿಸಿದೆ.







